ಬೆಂಗಳೂರು: ಡಿವೈಎಸ್ಪಿ ಎಂ.ಕೆ ಗಣಪತಿ ಅವರ ಆತ್ಮಹತ್ಯೆ ಪ್ರಕರಣ ಸಂಬಂಧ ವಿಪಕ್ಷಗಳ ಬಿಗಿಪಟ್ಟಿಗೆ ಮಣಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಕೊನೆಗೂ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಜಾರ್ಜ್ ರಾಜಕೀಯ ಜೀವನದಲ್ಲಿ ಹಲವು ವಿವಾದಗಳು ಭುಗಿಲೆದ್ದಿದ್ದವು. ಹಲವು ಆರೋಪಗಳು ಕೇಳಿ ಬಂದಿದ್ದವು. ತಮ್ಮ ರಾಜಕೀಯ ಶಕ್ತಿ ಸಾಮರ್ಥ್ಯ ಬಚಾವ್ ಆಗಬಹುದು ಎಂದು ಎಣಿಸಿದ್ದ ಜಾರ್ಜ್ ಲೆಕ್ಕಾಚಾರ ತಲೆಕೆಳಗಾಗಿದೆ, ದೆಹಲಿಯಲ್ಲಿ ಹೈ ಕಮಾಂಡ್ ಜೊತೆ ತಮಗಿರುವ ನಿಕಟ ಸಂಪರ್ಕ ತನ್ನನ್ನು ಸದಾಕಾಲ ರಕ್ಷಿಸುತ್ತದೆ ಎಂದೇ ಜಾರ್ಜ್ ಭಾವಿಸಿದ್ದರು. ಆದರೆ ಬದಲಾದ ರಾಜಕೀಯ ಸನ್ನಿವೇಶಗಳಿಂದ ಅವರು ರಾಜಿನಾಮೆ ನೀಡಿದ್ದಾಗಿದೆ.
ಚಾಕೋ ಜೊಸೆಫ್ ಕೇಲಚಂದ್ರ ಮತ್ತು ಮರಿಯಮ್ಮ ದಂಪತಿಯ ಮಗನಾಗಿ ಕೊಡಗಿನಲ್ಲಿ ಜನಿಸಿದ ಜಾರ್ಜ್ ತಮ್ಮ ಬಾಲ್ಯವನ್ನೆಲ್ಲಾ ಕೊಡಗಿನಲ್ಲೇ ಕಳೆದಿದ್ದರು, ಕೊಡಗಿನಲ್ಲಿ ಒಂದು ಸಣ್ಣ ಪ್ರಮಾಣದ ಜಮೀನು ಮಾತ್ರ ಇತ್ತು. ಬೈಬಲ್ ಸೊಸೈಟಿ ಆಫ್ ಇಂಡಿಯಾದ ಪ್ರಿಂಟಿಂಗ್ ಪ್ರೆಸ್ ನಲ್ಲಿ ಕೆಲಸ ಮಾಡಲು ಬೆಂಗಳೂರಿಗೆ ಬಂದ ಜಾರ್ಜ್ ಬೆಂಗಳೂರಿನಲ್ಲಿರುವ 'ಸಂಪದ್ಭರಿತ' ವ್ಯಕ್ತಿಗಳಲ್ಲಿ ಇವರು ಒಬ್ಬರಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಜಾರ್ಜ್ ಅವರ ಜೀವನದ ಹಲವು ಸಂಗತಿಗಳನ್ನು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಹಂಚಿಕೊಂಡಿದ್ದಾರೆ.
1980 ರಲ್ಲಿ ಯುವ ಕಾಂಗ್ರೆಸ್ ನ ಕಾರ್ಯದರ್ಶಿಯಾಗಿದ್ದ ಜಾರ್ಜ್ 1984 ರಲ್ಲಿ ಭಾರತೀನಗರ ವಿಧಾನಸಭೆ ಕ್ಷೇತ್ರದಿಂದ ಶಾಸಕನಾಗಿ ಆಯ್ಕೆಯಾದರು. 1989 ರಲ್ಲಿ ನಡೆದ ಚುನಾವಣೆಯಲ್ಲೂ ಆಯ್ಕಾಯಾದರು. ವಿರೇಂದ್ರ ಪಾಟೀಲ್ ಸರ್ಕಾರದಲ್ಲಿ ಜಾರ್ಜ್ ಸಾರಿಗೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗಳ ಸ್ವತಂತ್ರ್ಯ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
ಒಮ್ಮೆ ಅಂದು ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಬೆಂಗಳೂರಿಗೆ ಬಂದಿದ್ದರು, ಅಂದು ಜಾರ್ಜ್ ಅದೃಷ್ಟ ಬದಲಾಯಿತು. ವಿರೇಂದ್ರ ಪಾಟೀಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಹಾಕಿದ ರಾಜೀವ್ ಗಾಂಧಿ ಬಂಗಾರಪ್ಪ ಅವರನ್ನು ಸಿಎಂ ಆಗಿ ನೇಮಕ ಮಾಡಿದರು. ಬಂಗಾರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ಜಾರ್ಜ್ ತಮ್ಮ ಸಾಮರ್ಥ್ಯ ಮೀರಿ ಬೆಳೆದರು.
ಅದಾದ ಎರಡೇ ವರ್ಷಗಳಲ್ಲಿ ಎಸ್. ಬಂಗಾರಪ್ಪ ಭ್ರಷ್ಟಾಚಾರ ಆರೋಪದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಂಗಾರಪ್ಪನವರ ಅನುಯಾಯಿಯಾಗಿದ್ದ ಜಾರ್ಜ್ ಕಾಂಗ್ರೆಸ್ ಬಿಟ್ಟು, ಹೊಸದಾಗಿ ಸ್ಥಾಪನೆಯಾಗಿದ್ದ ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ಆದರೆ ಅವರು ಅಲ್ಲಿ ತುಂಬಾ ದಿನ ಉಳಿಯದೇ ಮರಳಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡರು.
2013 ರಲ್ಲಿ ಜಾರ್ಜ್ ಸರ್ವಜ್ಞ ನಗರ ವಿಧಾನ ಸಭೆ ಕ್ಷೇತ್ರದಿಂದ ಸುಮಾರು 69,673 ಮತಗಳ ಅಂತರದಲ್ಲಿ ಆಯ್ಕೆಯಾದರು. 5ನೇ ಬಾರಿಗೆ ಶಾಸಕರಾಗಿದ್ದ ಜಾರ್ಜ್ ಅವರನ್ನು ಸಿದ್ದರಾಮಯ್ಯ ಗೃಹ ಸಚಿವರನ್ನಾಗಿ ನೇಮಿಸಿದ್ದರು.
ಜಾರ್ಜ್ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಬೆಂಗಳೂರುಪ ನಗರದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ನಾಗರಿಕರ ಆಕ್ರೋಶಕ್ಕೆ ಕಾರಣವಾಯ್ತು.ನಂತರ ಜಿ.ಪರಮೇಶ್ವರ್ ಅವರು ಗೃಹಖಾತೆ ವಹಿಸಿಕೊಂಡ ನಂತರ ಜಾರ್ಜ್ ನಗರಾಭಿವೃದ್ಧಿ ಸಚಿವರಾದರು.
ಆದರೆ ಡಿವೈಎಸ್ ಪಿ ಗಣಪತಿ ತಾವು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಟಿವಿ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಜಾರ್ಜ್ ಅವರ ಹೆಸರನ್ನು ಉಲ್ಲೇಖಿಸಿದ್ದು, ಸರ್ಕಾರದ ಪಾರದರ್ಶಕ ಹಾಗೂ ಪ್ರಾಮಾಣಿಕತೆಗೆ ಸವಾವಾಗಿ ಪರಿಣಮಿಸಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ತಮ್ಮನ್ನು ಕೈ ಬಿಡುವುದಿಲ್ಲ ಎಂದು ಜಾರ್ಜ್ ಆತ್ನ ವಿಶ್ವಾಸದಿಂದ ಇದ್ದರು.
ಜಾರ್ಜ್ ರಾಜೀನಾಮೆಗೆ ಪ್ರತಿಪಕ್ಷಗಳು ಬಿಗಿಪಟ್ಟು ಹಿಡಿದಾಗ, ಜಾರ್ಜ್ ರಕ್ಷಣೆಗೆ ಮುಂದಾದ ಸರ್ಕಾರ ಅಲ್ಪಸಂಖ್ಯಾತರನ್ನು ಟಾರ್ಗೆಟ್ ವಿಪಕ್ಷಗಳು ಟಾರ್ಗೆಟ್ ಮಾಡುತ್ತಿವೆ. ಅದರಲ್ಲೂ ಕ್ರೈಸ್ತರನ್ನು ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿವೆ ಎಂದು ಸರ್ಕಾರ ಬೊಬ್ಬೆಯೊಡೆಯಿತು. ಆದರೆ ಜಾರ್ಜ್ ರಕ್ಷಣೆಗೆ ಮುಂದಾದರೇ ಪಕ್ಷದ ಇಮೇಜ್ ಗೆ ಧಕ್ಕೆಯಾಗುತ್ತದೆಂದು ಅರಿತ ಸರ್ಕಾರ ಮನದಟ್ಟಾಗಿ ಕೊನೆ ಗಳಿಗೆಯಲ್ಲಿ ಜಾರ್ಜ್ ರಾಜಿನಾಮೆ ಪಡೆದುಕೊಂಡಿದೆ.