ರಾಜಕೀಯ

ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ: ಕಾಂಗ್ರೆಸ್ ಗೆ ತಳಮಳ

Shilpa D

ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳಲ್ಲಿ ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳುತ್ತಿರುವು ಕಾಂಗ್ರೆಸ್ ಗೆ ನುಂಗಲಾರದ ಬಿಸಿತುಪ್ಪವಾಗಿದೆ.

ಕಾಂಗ್ರೆಸ್‌ನಲ್ಲಿ ಒಳಗೊಳಗೇ ಕುದಿಯುತ್ತಿರುವ ಅಸಮಾಧಾನದ ಲಾಭ ಪಡೆಯಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್‌ಗೆ ಪಾಠ ಕಲಿಸುವ ಪಣ ತೊಟ್ಟಂತಿದೆ. ಹಿಂದೆ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಜೆಡಿಎಸ್ ಸಾಥ್ ನೀಡಿ ಗೆಲುವಿಗೆ ಸಹಕರಿಸಿತ್ತು. ಅದೇ ರೀತಿ, ಈ ಬಾರಿಯ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆಲುವಿಗೆ ಬೆಂಬಲ ನೀಡಬೇಕೆಂಬ ಸೂತ್ರದ ಆಧಾರದ ಮೇಲೆ ಜೆಡಿಎಸ್, ಬಿಜೆಪಿ ಬೆಂಬಲ ಯಾಚಿಸಲು ಮುಂದಾಗಿದೆ.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕ, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಅವರ ನಡುವೆ ನಿನ್ನೆ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಅದಾದ ನಂತರ ಸಭೆಯಲ್ಲಿ ಚರ್ಚಿಸಲಾದ ವಿಚಾರಗಳನ್ನು ಇಬ್ಬರು ನಾಯಕರು ಆಯಾ ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದಾರೆ. ನಾಮಪತ್ರ ಹಿಂತೆಗೆಯಲು ಜೂ. 3 ಕೊನೆಯ ದಿನವಾಗಿದ್ದು, ಅಷ್ಟರೊಳಗೆ ವರಿಷ್ಠ ನಾಯಕರ ಮಟ್ಟದಲ್ಲಿ ಸಭೆ ನಡೆದು ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.

ಇನ್ನೂ ಕಾಂಗ್ರೆಸ್ ನ 10 ಶಾಸಕರನ್ನು ಜೆಡಿಎಸ್ ತನ್ನಡೆಗೆ ಸೆಳೆದುಕೊಳ್ಳಲು  ಕುದುರೆ ವ್ಯಾಪಾರ ಮಾಡುತ್ತಿದೆ ಎಂದು ರಾಜ್ಯ ಗುಪ್ತಚರ ಇಲಾಖೆ ವರದಿ ನೀಡಿರುವುದು ಕಾಂಗ್ರೆಸ್ ನಿದ್ದೆಗೆಡಿಸಿದೆ.

ವಿಧಾನ ಪರಿಷತ್ ಚುನಾವಣೆಗೆ ಎರಡೂ ಪಕ್ಷಗಳು ತಲಾ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಬಿಜೆಪಿಯಿಂದ ಮೊದಲ ಅಭ್ಯರ್ಥಿಯಾಗಿ ವಿ. ಸೋಮಣ್ಣ, ಎರಡನೇ ಅಭ್ಯರ್ಥಿಯಾಗಿ ಲೆಹರ್ ಸಿಂಗ್ ನಾಮಪತ್ರ ಸಲ್ಲಿಸಿದ್ದಾರೆ.

ಅದೇ ರೀತಿ ಜೆಡಿಎಸ್ ಕೂಡಾ ಕ್ರಮವಾಗಿ ಒಂದು ಮತ್ತು 2ನೇ ಅಭ್ಯರ್ಥಿಯಾಗಿ ನಾರಾಯಣಸ್ವಾಮಿ ಹಾಗೂ ಎಸ್.ಎಂ. ವೆಂಕಟಪತಿ ಅವರನ್ನು ಕಣಕ್ಕಿಳಿಸಿದೆ. ರಾಜ್ಯಸಭೆಯ 4 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಇಬ್ಬರು, ಬಿಜೆಪಿ ಹಾಗೂ ಜೆಡಿಎಸ್ ತಲಾ ಒಬ್ಬರನ್ನು ಗೆಲ್ಲಿಸಿಕೊಳ್ಳುವ ಅವಕಾಶವಿದೆ.

ತನ್ನ ಅಭ್ಯರ್ಥಿ ಎಂ ಫಾರೂಕ್ ಅವರನ್ನು ಗೆಲ್ಲಿಸಲು ಬಿಜೆಪಿ ಸಹಕಾರ ಕೋರಲಿರುವ ಜೆಡಿಎಸ್, ಅದರಂತೆ ಲೆಹರ್ ಸಿಂಗ್ ಅವರನ್ನು ಚುನಾಯಿಸಲು ಬಿಜೆಪಿ ಜೆಡಿಎಸ್ ಸಾಥ್ ನೀಡಲಿದೆ. ಜೆಡಿಎಸ್  ಕಾಂಗ್ರೆಸ್ ನ ಅತೃಪ್ತ ಶಾಸಕರ ಬೆಂಬಲ ಕೋರಿರುವ ಹಿನ್ನೆಲೆಯಲ್ಲಿ ರಾಜ್ಯಸಭೆಯ ಮೂರನೇ ಅಭ್ಯರ್ಥಿ ಕೆ.ಸಿ ರಾಮಮೂರ್ತಿ ಅವರ ಗೆಲುವಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

SCROLL FOR NEXT