ಮುಂಬೈ: ರಾಜ್ಯಸಭಾ ಚುನಾವಣೆಯ ಕುದುರೆ ವ್ಯಾಪಾರ ಆರೋಪದ ಮೇರೆಗೆ ಪ್ರಶ್ನೆ ಕೇಳಿದ ರಾಷ್ಟ್ರೀಯ ವಾಹಿನಿಯ ಪತ್ರಕರ್ತೆಯೊಬ್ಬರನ್ನು ದಕ್ಷಿಣ ಬೀದರ್ ಕ್ಷೇತ್ರದ ಪಕ್ಷೇತರ ಶಾಸಕ ಅಶೋಕ್ ಖೇಣಿ ಅವಾಚ್ಯ ಪದಗಳಿಂದ ನಿಂದಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.
ರಾಜ್ಯಸಭಾ ಚುನಾವಣೆಯಲ್ಲಿನ ಕುದುರೆ ವ್ಯಾಪರ ಸಂಬಂಧ ಪತ್ರಕರ್ತೆ ಕೇಳಿದ ಪ್ರಶ್ನೆಯಿಂದಾಗಿ ಕೋಪಗೊಂಡ ಶಾಸಕ ಅಶೋಕ್ ಖೇಣಿ ಪತ್ರಕರ್ತೆಯನ್ನು ಅವಾಚ್ಯ ಪದದಿಂದ ನಿಂದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ವಾಹಿನಿಯ ಕ್ಯಾಮೆರಾಮೆನ್ ಚಿತ್ರೀಕರಿಸಿದ್ದ ದೃಶ್ಯಾವಳಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ಖೇಣಿ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.
ಮೂಲಗಳ ಪ್ರಕಾರ ರಾಜ್ಯಸಭಾ ಚುನಾವಣಾ ಹಿನ್ನಲೆಯಲ್ಲಿ ಕಾಂಗ್ರೆಸ್ ನ 14 ಶಾಸಕರು ಮುಂಬೈನ ಜುಹು ಹೊಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದು, ಈ ಮಾಹಿತಿ ತಿಳಿದ ಟೈಮ್ಸ್ ನೌ ವಾಹಿನಿಯ ವರದಿಗಾರ್ತಿ ಮೇಘ ಪ್ರಸಾದ್ ಅವರು ಅಲ್ಲಿಗೆ ತೆರಳಿದ್ದಾರೆ. ಈ ವೇಳೆ ದಕ್ಷಿಣ ಬೀದರ್ ಕ್ಷೇತ್ರದ ಶಾಸಕ ಅಶೋಕ್ ಖೇಣಿ ಅವರು ಹೊಟೆಲ್ ನಿಂದ ಹೊರಗೆ ಬರುತ್ತಿದ್ದದ್ದನ್ನು ಗಮನಿಸಿದ ವರದಿಗಾರ್ತಿ ಖೇಣಿ ಬಳಿ ಹೋಗಿ ಪ್ರಶ್ನೆ ಕೇಳಿದ್ದಾರೆ.
ಪತ್ರಕರ್ತೆಯ ಪ್ರಶ್ನೆಗಳಿಗೆ ಒಲ್ಲದ ಮನಸ್ಸಿನಿಂದಲೇ ಉತ್ತರಿಸುತ್ತಿದ್ದ ಶಾಸಕ ಖೇಣಿ ಭದ್ರತಾ ಸಿಬ್ಬಂದಿ ಬಳಿ ತೆರಳಿ ಪತ್ರಕರ್ತೆಯನ್ನು ಅವಾಚ್ಯಪದದಿಂದ ನಿಂದಿಸಿ, ಆಕೆಯನ್ನು ಬಂಧಿಸುವಂತೆ ಕೇಳಿದ್ದಾರೆ. ಈ ವೇಳೆ ಪತ್ರಕರ್ತೆಯ ಕೋಪ ನೆತ್ತಿಗೇರಿ ಸ್ಥಳದಲ್ಲೇ ಖೇಣಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಖೇಣಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ ಸುದ್ದಿವಾಹಿನಿ
ಇದೇ ವೇಳೆ ತನ್ನ ವರದಿಗಾರ್ತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಶಾಸಕ ಅಶೋಕ್ ಖೇಣಿ ವಿರುದ್ಧ ಸುದ್ದಿವಾಹಿನಿಯ ಆಡಳಿತ ಮಂಡಳಿ ಕ್ರಿಮಿನಲ್ ಕೇಸ್ ದಾಖಲಿಸಿದೆ.