ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರಿಗೆ ಮತ ಹಾಕಲು ಹಣಕ್ಕಾಗಿ ಡಿಮಾಂಡ್ ಮಾಡಿದ ಶಾಸಕರನ್ನು ಚುನಾವಣೆಯಿಂದ ದೂರವಿಡುವಂತೆ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಅವರು ಸೋಮವಾರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಇಂದು ಶಾಸಕರ ವಿರುದ್ಧದ ಕುಟುಕು ಕಾರ್ಯಾಚರಣೆಯ ಬಗ್ಗೆ ವರದಿಗಾರರಿಗೆ ಪ್ರತಿಕ್ರಿಯಿಸಿದ ಸದಾನಂದಗೌಡ, ವೋಟಿಗಾಗಿ ನೋಟು ಕೇಳಿದ ಶಾಸಕರಿಗೆ ಯಾವುದೇ ಕಾರಣಕ್ಕೂ ಮತದಾನಕ್ಕೆ ಅವಕಾಶ ನೀಡಬೇಡಿ ಎಂದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸದಾನಂದಗೌಡ, ತಮ್ಮಲ್ಲಿರುವ ಆಂತರಿಕ ಕಚ್ಚಾಟದಿಂದ ಹೆದರಿಕೆಯಾಗಿ ಕಾಂಗ್ರೆಸ್‌ನವರು ರೆಸಾರ್ಟ್ ರಾಜಕಾರಣ ಮಾಡುತ್ತಿದ್ದಾರೆ. ದೇಶಾದ್ಯಂತ ಸೋಲಿನ ಭೀತಿಯಲ್ಲಿರುವ ಕಾಂಗ್ರೆಸ್‌ನವರಿಗೆ ಈ ಬಾರಿಯೂ ಸೋಲಾಗಬಹುದೆಂದು ಹೆದರಿ ತಮ್ಮ ಶಾಸಕರೂ ಸೇರಿದಂತೆ ಪಕ್ಷೇತರರನ್ನು ರೆಸಾರ್ಟ್‌ಗೆ ಕರೆದೊಯ್ದಿದ್ದಾರೆ ಎಂದು ವ್ಯಂಗ್ಯವಾಡಿದರು.
ಕುಟುಕು ಕಾರ್ಯಾಚರಣೆಯಲ್ಲಿ ಕೋಲಾರ ಪಕ್ಷೇತರ ಶಾಸಕ ವರ್ತೂರ್ ಪ್ರಕಾಶ್, ಆಳಂದ್ ಕೆಜೆಪಿ ಶಾಸಕ ಬಿ.ಆರ್.ಪಾಟೀಲ್, ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹಾಗೂ ಬಸವಕಲ್ಯಾಣ ಜೆಡಿಎಸ್ ಶಾಸಕ ಮಲ್ಲಕಾರ್ಜುನ್ ಖೂಬಾ ಮತ ಹಾಕಲು ಐದು ಕೋಟಿ ರುಪಾಯಿ ಕೇಳಿರುವುದು ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ನಡೆಸಿದ ಕುಟುಕು ಕಾರ್ಯಾಚರಣೆಯಿಂದ ಬಹಿರಂಗವಾಗಿತ್ತು.