ರಾಜಕೀಯ

ಸಂಪುಟ ಪುನಾರಚನೆ ಸರ್ಕಸ್; ಮಂತ್ರಿಗಿರಿಗಾಗಿ ಹಿರಿತಲೆಗಳ ಲಾಬಿ

Shilpa D

ನವದೆಹಲಿ: ಸಚಿವ ಸಂಪುಟ ಪುನಾರಚನೆ  ಮಾಡಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯ ಹೈ ಕಮಾಂಡ್ ಭೇಟಿ ಮಾಡಲು ದೆಹಲಿಗೆ ತೆರಳಿದ್ದಾರೆ. ಇದೇ ವೇಳೆ ಸಂಪುಟಕ್ಕೆ ಬಿಸಿ ರಕ್ತದ ಹೊಸ ಯುವ ಸಚಿವರನ್ನು ಸೇರಿಸಿಕೊಳ್ಳಲು ಸಿಎಂ ಮನಸ್ಸು ಮಾಡಿದ್ದಾರೆ. ಆದರೆ ಸಂಪುಟದಲ್ಲಿರುವ ಹಿರಿಯ ಮುಖಂಡರನ್ನು ಕೈಬಿಡದಂತೆ ಮುಂದುವರಿಸಿಕೊಂಡು ಹೋಗಬೇಕು ಎನ್ನುವ ಉದ್ದೇಶದಿಂದ ದೆಹಲಿಯಲ್ಲಿ ಲಾಬಿ ಆರಂಭವಾಗಿದೆ.

ದೆಹಲಿಯ ಮದರ್ ತೆರೆಸಾ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ನಿವಾಸಕ್ಕೆ ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟ ಪುನಾರಚನೆ ಬಗ್ಗೆ ಮಾತುಕತೆ ನಡೆಸಿದ್ದಾರೆ. ಮತ್ತೊಂದೆಡೆ ಸಚಿವ ಸ್ಥಾನಕಾಂಕ್ಷಿಗಳು ಲಾಬಿ ನಡೆಸುತ್ತಿದ್ದಾರೆ.

ಸುಮಾರು ಹತ್ತರಿಂದ ಹದಿನೈದು ಸಚಿವರನ್ನು ಸಂಪುಟದಿಂದ ಕೈಬಿಟ್ಟು ಹೊಸ ಮುಖಗಳನ್ನು ಸೇರಿಸಿಕೊಳ್ಳಲು ಸಿದ್ದರಾಮಯ್ಯ ಉತ್ಸಕರಾಗಿದ್ದಾರೆ ಎನ್ನಲಾಗಿದೆ. ವಸತಿ ಸಚಿವ ಅಂಬರೀಷ್, ಶ್ಯಾಮನೂರು ಶಿವಶಂಕರಪ್ಪ, ಖಮರುಲ್ ಇಸ್ಲಾಂ, ವಿ ಶ್ರೀನಿವಾಸ್ ಪ್ರಸಾದ್, ಬಾಬೂರಾವ್ ಚಿಂಚನಸೂರ್, ಮತ್ತು ರೋಷನ್ ಬೇಗ್ ಅವರನ್ನ ಸಂಪುಟದಿಂದ ಕೈಬಿಡಲು ಸಿಎಂ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನೂ ಕಂದಾಯ ಸಚಿವ ವಿ,ಶ್ರೀನಿವಾಸ್ ಪ್ರಸಾದ್ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಸಂಪುಟದಿಂದ ಕೈ ಬಿಡಲು ಸಿಎಂ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀನಿವಾಸ್ ಪ್ರಸಾದ್ ಅವರ ಬೆಂಬಲಿಗರು ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ. ಶ್ರೀನಿವಾಸ್ ಪ್ರಸಾದ್ ಅವರನ್ನು ಸಂಪುಟದಲ್ಲಿ ಮುಂದುವರಿಸಿಕೊಂಡು ಹೋಗುವಂತೆ ಒತ್ತಾಯಿಸಿದ್ದಾರೆ. ಇನ್ನೂ ದಲಿತ ಮತಗಳ ಓಲೈಕೆ ಹಿನ್ನೆಲೆಯಲ್ಲಿ ಶ್ರೀನಿವಾಸ್ ಪ್ರಸಾದ್ ಅವರನ್ನು ಸಂಪುಟದಿಂದ ಕೈ ಬಿಡಬಾರದು ಎಂದು ಹಿರಿಯ ಕಾಂಗ್ರೆಸ್ ನಾಯಕರುಗಳಾದ ಆಸ್ಕರ್ ಫರ್ನಾಂಡೀಸ್,ಎ.ಕೆ ಆಂಟನಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಹಲವು ನಾಯಕರು ಮನವಿ ಮಾಡಿದ್ದಾರೆ.

ಶಾಸಕರುಗಳಾದ ಮಾಲೀಕಯ್ಯ ಗುತ್ತೇದಾರ್, ಎಂ.ವೈ ಮೇಟಿ, ಕೆ.ಬಿ ಕೋಳಿವಾಡ, ಅನಿಲ್ ಲಾಡ್, ರಮೇಶ್ ಕುಮಾರ್, ತನ್ವೀರ್ ಸೇಠ್, ಎನ್.ಎ ಹ್ಯಾರಿಸ್, ಮೋಟಮ್ಮ, ಕಾಗೋಡು ತಿಮ್ಮಪ್ಪ, ಮತ್ತು ಕೃಷ್ಣಪ್ಪ ರೇಸ್ ನಲ್ಲಿದ್ದಾರೆ. ಸಂಪುಟಕ್ಕೆ 10 ಮಂದಿ ಸಚಿವರನ್ನು ಸೇರಿಸಿ, 20 ಶಾಸಕರುಗಳನ್ನು ನಿಗಮ ಮಂಡಳಿಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಸಿಎಂ ನಿರ್ಧರಿಸಿದ್ದಾರೆ ಎನ್ನಲಾಗಿದೆ,

SCROLL FOR NEXT