ಮೈಸೂರು: ತಮ್ಮನ್ನು ಸಚಿವ ಸಂಪುಟದಿಂದ ಕೈಬಿಡುತ್ತಿರುವ ಮಾಹಿತಿ ದೊರೆಯುತ್ತಿದ್ದಂತೆ ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವ ಸಂಪುಟ ಪುನಾರಚನೆ ಬಗ್ಗೆ ಮೈಸೂರಿನಲ್ಲಿ ವರದಿಗಾರರಿಗೆ ಪ್ರತಿಕ್ರಿಯಿಸಿದ ಶ್ರೀನಿವಾಸ್ ಪ್ರಸಾದ್ ಅವರು, ಸಂಪುಟ ಪುನಾರಚನೆ ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟದ್ದು. ಯಾರನ್ನ ಮಂತ್ರಿ ಮಾಡಬೇಕು ಅನ್ನೋದು ಸಿಎಂ ಪರಮಾಧಿಕಾರ ಮತ್ತು ಅವರ ವಿವೇಚನೆಗೆ ಬಿಟ್ಟಿದ್ದು. ಆದರೆ ಅವರು ಈ ಬಗ್ಗೆ ಯೋಚನೆ ಮಾಡಬೇಕಿತ್ತು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಮೂರು ವರ್ಷಗಳಲ್ಲಿ ಯಾರು ಏನು ಮಾಡಿದ್ದಾರೆ, ಯಾರ ಮೇಲೆ ಆಪಾದನೆ ಇದೆ ಎಂಬುದರ ಬಗ್ಗೆ ಸಿಎಂ ಯೋಚನೆ ಮಾಡಬೇಕಿತ್ತು ಮತ್ತು ಇವೆಲ್ಲವನ್ನು ಮಾಡಬೇಕಾದದ್ದು ಒಬ್ಬ ಮುಖ್ಯಮಂತ್ರಿಯ ಕರ್ತವ್ಯ. ಆದೆ ಸಿಎಂ ಸಿದ್ದರಾಮಯ್ಯ ಅದ್ಯಾವುದನ್ನು ಮಾಡಿಲ್ಲ. ಸಚಿವರ ಮೌಲ್ಯಮಾಪನ ಮಾಡುವಲ್ಲಿ ಸಿದ್ದರಾಮಯ್ಯ ಸಂಪೂರ್ಣ ವಿಫಲವಾಗಿದ್ದಾರೆ ಎಂದರು.
ಸಚಿವ ಸಂಪುಟ ಪುನಾರಚನೆಗೆ ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟದಿಂದ ವಿ.ಶ್ರೀನಿವಾಸ್ ಪ್ರದಾಸ್ ಸೇರಿದಂತೆ ಸುಮಾರು 13 ಸಚಿವರನ್ನು ಕೈಬಿಟ್ಟು, ಹೊಸಬರಿಗೆ ಅವಕಾಶ ನೀಡುತ್ತಿದ್ದಾರೆ. ನೂತನ ಸಚಿವರು ನಾಳೆ ಮಧ್ಯಾಹ್ನ 4 ಗಂಟೆಗೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.