ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಪುನಾರಚನೆ ಮಾಡಿದ ಬೆನ್ನಲ್ಲೇ ಸಚಿವ ಆಕಾಂಕ್ಷಿಗಳು ಹಾಗೂ ಸಚಿವ ಸ್ಥಾನ ಕಳೆದುಕೊಂಡವರು ಸಿಎಂ ವಿರುದ್ಧವೇ ಬಂಡಾಯವೆದ್ದಿದ್ದಾರೆ.
ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಕಲಬುರ್ಗಿ ಜಿಲ್ಲೆ ಅಫ್ಜಲಪುರ ಕಾಂಗ್ರೆಸ್ ಶಾಸಕ ಮಾಲಿಕಯ್ಯ ಗುತ್ತೆದಾರ್ ಅವರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿರುವುದಾಗಿ ಬುಧವಾರ ಹೇಳಿದ್ದಾರೆ.
ತಮ್ಮ ಕ್ಷೇತ್ರದ ಕಾರ್ಯಕರ್ತರೊಂದಿಗೆ ಚರ್ಚಿಸಿದ ನಂತರ ಇಂದು ಸಂಜೆ ತಮ್ಮ ರಾಜಿನಾಮೆ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸುವುದಾಗಿ ಗುತ್ತೆದಾರ್ ತಿಳಿಸಿದ್ದಾರೆ.
ಸಚಿವ ಸಂಪುಟ ಪುನಾರಚನೆಯಿಂದಾಗಿ ಹಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿ ಬಂಡಾಯವೆದ್ದಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್, ಶ್ರೀನಿವಾಸ್ ಪ್ರಸಾದ್, ಮಾಲಕರೆಡ್ಡಿ ಜೊತೆಗೆ ಮುನಿರತ್ನ ಕೂಡಾ ಅಸಮಾಧಾನವ್ಯಕ್ತಪಡಿಸಿದ್ದರು. ತಾವು 8 ಮಂದಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ಬಗ್ಗೆ ಚಿಂತಿಸುತ್ತಿದ್ದೇವೆ ಎಂದು ಸಹ ಮುನಿರತ್ನ ಹೇಳಿಕೆ ನೀಡಿದ್ದರು. ಈಗಾಗಲೇ ರೆಬೆಲ್ ಸ್ಟಾರ್ ಅಂಬರೀಶ್ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿದ್ದು, ರಾಜಿನಾಮೆ ನಿರ್ಧಾರದಿಂದ ಹಿಂದೆ ಸರಿಯೋದಿಲ್ಲ ಎಂದು ಹೇಳಿದ್ದಾರೆ.