ರಾಜಕೀಯ

ನಾಯಕತ್ವ ಬದಲಾವಣೆ ಕೂಗು ಎತ್ತಿದ ಶ್ರೀನಿವಾಸ್ ಪ್ರಸಾದ್ ಮನವೊಲಿಕೆಗೆ ಆಸ್ಕರ್ ಫರ್ನಾಂಡಿಸ್ ಯತ್ನ

Lingaraj Badiger
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟದಿಂದ ತಮ್ಮನ್ನು ಕೈಬಿಟ್ಟಿದ್ದಕ್ಕೆ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿ, ನಾಯಕತ್ವ ಬದಲಾವಣೆಯ ಕೂಗು ಎತ್ತಿದ ಮಾಜಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಅವರ ಮನವೊಲಿಕೆಗೆ ಕಾಂಗ್ರೆಸ್ ನಾಯಕರು ಯತ್ನಿಸುತ್ತಿದ್ದಾರೆ. 
ಈ ಸಂಬಂಧ ಇಂದು ಬೆಂಗಳೂರಿನ ಗಾಲ್ಫ್ ಕೋರ್ಸ್ ರಸ್ತೆಯಲ್ಲಿರುವ ಶ್ರೀನಿವಾಸ್ ಪ್ರಸಾದ್ ಅವರ ಮನೆಗೆ ತೆರಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್ ಅವರು, ಕಾಂಗ್ರೆಸ್ ಗೆ ಧಕ್ಕೆಯಾಗದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದರು.
ಶ್ರೀನಿವಾಸ್ ಪ್ರಸಾದ್ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಫರ್ನಾಂಡಿಸ್, ಕಾಂಗ್ರೆಸ್ ಪಕ್ಷಕ್ಕೆ ಧಕ್ಕೆಯಾಗುವ ಕೆಲಸ ಮಾಡಲ್ಲ ಎಂದು ಶ್ರೀನಿವಾಸ್ ಪ್ರಸಾದ್ ಭರವಸೆ ನೀಡಿದ್ದಾರೆ. ಪಕ್ಷದ ಚೌಕಟ್ಟಿನಲ್ಲೇ ಎಲ್ಲಾ ಬೆಳವಣಿಗೆ ಕುರಿತು ಚರ್ಚೆ ನಡೆಸಿದ್ದೇವೆ. ಅದೇ ರೀತಿ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಅವರು ಹೇಳಿರುವುದಾಗಿ ತಿಳಿಸಿದರು. 
ಇದೇ ವೇಳೆ ಮತ್ತೊರ್ವ ಅತೃಪ್ತ ಮಾಜಿ ಸಚಿವ ಅಂಬರೀಷ್ ಜೊತೆ ನಾನು ಯಾವುದೇ ಮಾತುಕತೆ ನಡೆಸುತ್ತಿಲ್ಲ ಎಂದು ಆಸ್ಕರ್ ಫರ್ನಾಂಡಿಸ್ ಅವರು ಸ್ಪಷ್ಟಪಡಿಸಿದರು. 
ಇಂದು ಬೆಳಗ್ಗೆ ಅಂಬರೀಷ್ ಭೇಟಿ ಮಾಡಿದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಶ್ರೀನಿವಾಸ್ ಪ್ರಸಾದ್, ಅತೃಪ್ತ ಶಾಸಕರೆಲ್ಲಾ ಒಂದೆಡೆಗೆ ಸೇರುತ್ತಿದ್ದೇವೆ. ನಮಗೆ ವ್ಯಕ್ತಿಗಿಂತ ಪಕ್ಷವೇ ಮುಖ್ಯ. ನಾಯಕತ್ವ ಬದಲಾವಣೆ ಅಂತ ಪದೇ, ಪದೇ ಹೇಳಕ್ಕಾಗಲ್ಲ. ನೀವೇ ಅರ್ಥಮಾಡಿಕೊಳ್ಳಿ ಎಂದಿದ್ದರು. ಅಲ್ಲದೆ ನಾಯಕತ್ವ ಬದಲಾವಣೆಗೆ ಅತೃಪ್ತ ಶಾಸಕರು ಪರೋಕ್ಷವಾಗಿ ಒತ್ತಾಯಿಸುತ್ತಿದ್ದಾರೆ ಎಂದಿದ್ದರು.
SCROLL FOR NEXT