ಬೆಂಗಳೂರು: ಸಚಿವ ಸಂಪುಟದಿಂದ ತಮ್ಮ ಕೈಬಿಟ್ಟಿದ್ದಕ್ಕೆ ಅಸಮಾಧಾನಗೊಂಡಿರುವ ಮಾಜಿ ನಗರಾಭಿವೃದ್ಧಿ ಸಚಿವ ವಿನಯ್ ಸೊರಕೆ ಅವರಿಗೆ ಗುರುವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ದೂರವಾಣಿ ಕರೆ ಮಾಡಿದ್ದು, ಪಕ್ಷ ಸಂಘಟನೆಯತ್ತ ಗಮನ ನೀಡುವಂತೆ ಸೂಚಿಸಿದ್ದಾರೆ.
ಸಚಿವ ಸ್ಥಾನ ಕಳೆದುಕೊಂಡ ಹಲವು ಹಲವು ಅತೃಪ್ತ ಶಾಸಕರು ನಾಯಕತ್ವ ಬದಲಾವಣೆಯ ಕೂಗು ಎತ್ತಿದ್ದು, ಇದರ ಬೆನ್ನಲ್ಲೇ ಇಂದು ಅತೃಪ್ತ ಸೊರಕೆಗೆ ಕರೆ ಮಾಡಿದ ಸೋನಿಯಾ ಗಾಂಧಿ, ಸುಮಾರು 10 ನಿಮಿಷಗಳ ಕಾಲ ಮಾತನಾಡಿದ್ದಾರೆ. ಈ ವೇಳೆ ಸೊರಕೆ ಅವರು ಸಚಿವ ಸಂಪುಟದಿಂದ ಕೈಬಿಟ್ಟಿರುವುದಕ್ಕೆ ಕಾರಣವೇನು ಎಂದು ಸೋನಿಯಾ ಗಾಂಧಿಯನ್ನು ಕೇಳಿದ್ದಾರೆ. ಅಲ್ಲದೇ ಬಿಲ್ಲವ ಸಮುದಾಯದವನಾದ ನಾನು ಸಚಿವ ಸಂಪುಟದಿಂದ ಹೊರಗುಳಿದಿರುವುದಕ್ಕೆ ಸಮುದಾಯಕ್ಕೆ ಅಸಮಾಧಾನ ತಂದಿದೆ ಎಂದಿದ್ದಾರೆ.
ನಾನು ಬಿಲ್ಲವ ಸಮುದಾಯದ ನಾಯಕನಾಗಿ ಹಲವು ಅಭಿವೃದ್ಧಿ ಕೆಲಸವನ್ನು ಮಾಡಿದ್ದೇನೆ. ಆದರೆ, ನನ್ನನ್ನು ಸಚಿವ ಸಂಪುಟದಿಂದ ಕೈಬಿಡಲಾಗಿದೆ. ಇದು ನನಗೆ ಬೇಸರ ತಂದಿದೆ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ಸೋನಿಯಾ ನಾವು ಯಾವ ಸಮುದಾಯದ ನಾಯಕರನ್ನು ಕೈಬಿಡುತ್ತಿಲ್ಲ. ನೀವು ಪಕ್ಷ ಸಂಘಟನೆಯತ್ತ ಗಮನ ನೀಡಿ ಎಂದು ಸಲಹೆ ನೀಡಿದ್ದಾರೆ.