ಬೆಂಗಳೂರು: ಸಂಪುಟ ಪುನಾರಚನೆ ಬಳಿಕ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿದ್ದ ಬಂಡಾಯ ಬಹುತೇಕ ಶಮನಗೊಳ್ಳುವ ಲಕ್ಷಣಗಳು ಕಾಣುತ್ತಿವೆ.
ಸಂಪುಟ ಪುನಾರಚನೆಯಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದಿದ್ದ ಬಂಡಾಯ ಶಾಸಕರು ಎಸ್.ಎಂ. ಕೃಷ್ಣ ಅವರು ನಾಯಕತ್ವ ವಹಿಸುವಂತೆ ಆಗ್ರಹಿಸಿದ್ದರು. ಇದರಂತೆ ನಿನ್ನೆ ಎಸ್.ಎಂ. ಕೃಷ್ಣ ಅವರನ್ನು ಭೇಟಿಯಾಗಿರುವ ಅತೃಪ್ತ ಶಾಸಕರು ಮಾತುಕತೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ.
ಮಾತುಕತೆ ವೇಳೆ ಎಸ್.ಎಂ. ಕೃಷ್ಣ ಅವರು ಬಂಡಾಯ ಶಾಸಕರಿಗೆ ಸಮಾಧಾನ ಹೇಳಿದ್ದು, ಸಂಯಮದಿಂದಿರುವಂತೆ ಸಲಹೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
ಬಂಡಾಯ ಶಾಸಕರಿಂದಾಗಿ ರಾಜ್ಯದ ಮೇಲೆ ಬೀರುತ್ತಿರುವ ಪರಿಣಾಮದ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿರುವ ಕೃಷ್ಣ ಅವರು, ಪಕ್ಷದ ಹಿತಾಸಕ್ತಿಗಳಿಗೆ ಹಾನಿಯುಂಟು ಮಾಡುವ ಯಾವುದೇ ಚಟುವಟಿಕೆಗಳಿಗೆ ಕೈ ಹಾಕದಂತೆ ಶ್ರೀನಿವಾಸ ಪ್ರಸಾದ್ ಅವರಿಗೆ ಸಲಹೆ ನೀಡಿದ್ದಾರೆಂದು ಹೇಳಲಾಗುತ್ತಿದೆ.
ಈ ಕುರಿತಂತೆ ಮಾತನಾಡಿರುವ ಶ್ರೀನಿವಾಸ ಪ್ರಸಾದ್ ಅವರು, ಪಕ್ಷದ ನಾಯಕತ್ವ ಬದಲಾವಣೆಗಾಗಿ ಹಿಡಿದಿರುವ ನಮ್ಮ ಪಟ್ಟು ಎಂದಿಗೂ ಬದಲಾಗುವುದಿಲ್ಲ. ಸಿದ್ದರಾಮಯ್ಯ ವಿರುದ್ಧದ ನಮ್ಮ ಹೋರಾಟವನ್ನು ನಾವು ಮುಂದುವರೆಸುತ್ತೇವೆ. ನಮ್ಮ ಆಗ್ರಹಗಳಿಗೆ ಇಂತಹ ದಿನವೆಂಬ ಗಡುವಿಲ್ಲ. ಎಸ್.ಎಂ.ಕೃಷ್ಣ ಅವರು ಪರಿಣಿತ ರಾಜಕಾರಣಿಯಾಗಿದ್ದು, ರಾಜ್ಯದ ನಾಯಕತ್ವ ವಿಚಾರ ಹಾಗೂ ಬೆಳವಣಿಗೆಗಳನ್ನು ಸರಿಯಾದ ಸಮಯಕ್ಕೆ ಹೈ ಕಮಾಂಡ್ ಗಮನಕ್ಕೆ ತರುತ್ತಾರೆಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.