ಮೈಸೂರು: ತಮ್ಮನ್ನು ಸಚಿವ ಸ್ಥಾನದಿಂದ ಕೈಬಿಟ್ಟಿದ್ದಕ್ಕೆ ರೆಬಲ್ ಆಗಿರುವ ಮಾಜಿ ಸಚಿವ ವಿ,ಶ್ರೀನಿವಾಸ್ ಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ವಾಗ್ದಾಳಿಯನ್ನು ಮುಂದುವರೆಸಿದ್ದು, ಸಿದ್ದರಾಮಯ್ಯ ಹೊಟ್ಟೆಕಿಚ್ಚಿನ ಮನುಷ್ಯ. ತಮ್ಮ ಸ್ವಾರ್ಥಕ್ಕಾಗಿ ಸಂಪುಟ ಪುನಾರಚನೆ ಮಾಡಿದ್ದಾರೆ ಎಂದು ಶುಕ್ರವಾರ ಆರೋಪಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸ್ ಪ್ರಸಾತ್, ಸಿದ್ದರಾಮಯ್ಯ ಅವರನ್ನು ಸಿಎಂ ಮಾಡುವಲ್ಲಿ ನನ್ನ ಪ್ರಯತ್ನವೂ ಇದೆ. ವರುಣಾದಲ್ಲಿ ಸಿದ್ದರಾಮಯ್ಯರನ್ನು ನಿಲ್ಲಿಸಿದ್ದೆ ನಾನು. ಆದ್ರೆ ಸಿಎಂ ನನಗೆ ವಿಶ್ವಾಸದ್ರೋಹ ಎಸಗಿದರು. ಹಾಗಾಗಿ ವಿಶ್ವಾಸದ್ರೋಹಿ ವಿರುದ್ಧ ಮಾತನಾಡುವ ಸಮಯ ಈಗ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅಹಂಕಾರದ ಸಿಎಂ. ಅವರು ಅನಾಗರಿಕವಾಗಿ ವರ್ತಿಸಿದ್ದಾರೆ. ಸಿಎಂ ಹೊಟ್ಟೆಕಿಚ್ಚಿನ ಮನುಷ್ಯ. ತಮ್ಮ ಸ್ವಾರ್ಥಕ್ಕಾಗಿ ಸಂಪುಟ ಪುನಾರಚನೆ ಮಾಡಿರುವುದಾಗಿ ದೂರಿದರು.
ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಹಾಗೂ ದಿಗ್ವಿಜಯ್ ಸಿಂಗ್ ಅವರ ಸ್ವಾರ್ಥದಿಂದ ಈ ಸಂಪುಟ ಪುನಾರಚನೆ ಆಗಿದೆ. ಸಿದ್ದರಾಮಯ್ಯ ಸಣ್ಣತನವಿರುವ ಮನುಷ್ಯ. ಅವರ ಜೊತೆ ಮಾತು ಬಿಡಿ, ಮುಖ ನೋಡಲು ಇಷ್ಟವಿಲ್ಲ. ಸಚಿವ ಸ್ಥಾನದಿಂದ ನಾನು ಗೌರವದ ನಿವೃತ್ತಿ ಬಯಸಿದ್ದೆ. ಆದರೆ ಸಿದ್ದರಾಮಯ್ಯ ನನಗೆ ಸಂಧ್ಯಾಕಾಲದಲ್ಲಿ ಅವಮಾನ ಮಾಡಿಬಿಟ್ಟ ಎಂದು ಏಕವಚನದಲ್ಲಿ ಅಸಮಾಧಾನವ್ಯಕ್ತಪಡಿಸಿದರು.