ಬೆಂಗಳೂರು: ಮೇ 13ಕ್ಕೆ ಸಿದ್ದರಾಮಯ್ಯ ನೇತೃತ್ವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ಗೆ ಪ್ರಗತಿ ಪರಿಶೀಲನಾ ವರದಿ ಸಲ್ಲಿಸಲು ಸಂಪುಟ ಸಚಿವು ಕಾರ್ಯ ಮಗ್ನರಾಗಿದ್ದಾರೆ,
ಇನ್ನೂ ಮುಖ್ಯಮಂತ್ರಿಗಳ ಕಾರ್ಯಾಲಯ ಕೂಡ ಸರ್ಕಾರದ 3 ವರ್ಷದ ಸಾಧನೆಗಳ ಬಗ್ಗೆ ಮಾಹಿತಿ ನೀಡುವ ಪುಸ್ತಕ ಸಿದ್ದಪಡಿಸುವಲ್ಲಿ ನಿರತವಾಗಿದೆ. ಜೊತೆಗೆ ಪ್ರತಿಯೊಬ್ಬ ಸಚಿವರ ಪ್ರಗತಿ ಕೆಲಸ, ಕಾರ್ಯ ನಿರ್ವಹಣೆಗಳ ಬಗ್ಗೆ ಪುಸ್ತಕದಲ್ಲಿ ಮಾಹಿತಿ ನೀಡಲಾಗುವುದು.
ಉತ್ತಮ ಕಾರ್ಯದಕ್ಷತೆ ತೋರದ ಸಚಿವರು ಅಂತಿಮ ಕಸರತ್ತು ನಡೆಸುತ್ತಿದ್ದಾರೆ. ಸಂಪುಟ ಸರ್ಜರಿಯಲ್ಲಿ ತಮ್ಮ ಮಂತ್ರಿಗಿರಿ ಕಳೆದುಕೊಳ್ಳುವ ಭಯದಲ್ಲಿ ಕೆಲ ಸಚಿವರಿದ್ದಾರೆ. ಮುಂದಿನ ತಿಂಗಳು ನಡೆಯುವ ಸಂಪುಟ ಪುನಾರಚನೆಯಲ್ಲಿ ಇವರ ಭವಿಷ್ಯ ನಿರ್ಧಾರವಾಗಲಿದೆ.
ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮದ ನಂತರ ಲವಲವಿಕೆಯಿಂದಿರುವ ಕೈಗಾರಿಕಾ ಮಂತ್ರಿ ಆರ್. ವಿ ದೇಶಪಾಂಡೆ ತಮ್ಮ ರಿಪೋರ್ಟ್ ಕಾರ್ಡ್ ಗೆ ಅಂತಿಮ ಟಚ್ ಅಪ್ ನೀಡುತ್ತಿದ್ದಾರೆ. ಇನ್ ವೆಸ್ಟ್ ಕರ್ನಾಟಕ ರಾಜ್ಯ ಸರ್ಕಾರದ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. 2017 ರಲ್ಲಿ ಬೆಂಗಳೂರಿನಲ್ಲಿ ಬೃಹತ್ ಮಟ್ಟದಲ್ಲಿ ಪ್ರವಾಸಿ ಭಾರತೀಯ ದಿವಸ್ ಆಚರಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗಿದೆ.
ಇನ್ನೂ ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ನೀರಾವರಿ ಇಲಾಖೆ ಕಾರ್ಯಕ್ರಮಗಳ ಪರಿಶೀಲನೆ ಸಂಬಂಧ ಪ್ರವಾಸ ಕೈಗೊಂಡಿದ್ದಾರೆ. ಯಾವ್ಯಾವ ಪ್ರದೇಶಗಳಲ್ಲಿ ವಿವಿಧ ನೀರಾವರಿ ಯೋಜನೆಗಳು ಅನುಷ್ಠಾನಗೊಂಡಿವೆ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ನೀರಾವರಿ ಇಲಾಖೆಯಲ್ಲಿ ಕೈಗೊಂಡಿರುವ ಪ್ರಮುಖ ಯೋಜನೆಗಳು, ಅದರ ಪ್ರಗತಿ, ಯೋಜನೆಗಳ ಅನುಷ್ಠಾನ ಕುರಿತಂತೆ ಡಾಕ್ಯುಮೆಂಟರಿ ಸಿದ್ದಪಡಿಸುತ್ತಿರುವುದಾಗಿ ಎಂಬಿ ಪಾಟೀಲ್ ತಿಳಿಸಿದ್ದಾರೆ.
ನೀರಾವರಿ ಇಲಾಖೆಯ ಉತ್ತಮ ಕೆಲಸಗಳಿಗೆ, ಅಂದರೆ ಜಲಾಶಯ ನಿರ್ವಹಣೆ, ನೀರಿನ ಕಾಲುವೆಗಳಿಗೆ ಸೌರಶಕ್ತಿ ಫಲಕ ಅಳವಡಿಕೆ ಸೇರಿದಂತೆ ಹಲವು ಕಾರಣಗಳಿಗೆ, ಕೇಂದ್ರ ಸರ್ಕಾರ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ ದೊರೆತಿರುವ ಪ್ರಶಸ್ತಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಇದೆಲ್ಲಾ ತಮ್ಮ ಇಲಾಖೆಯ ಉತ್ತಮ ಕೆಲಸಕ್ಕೆ ಸಿಕ್ಕ ಪ್ರತಿಫಲವಾಗಿದೆ ಎಂದು ಹೇಳಿದ್ದಾರೆ.
ಇನ್ನು ರಾಜ್ಯದಲ್ಲಿ ಬರಗಾಲ ಇರುವುದರಿಂದ ಸಿದ್ದರಾಮಯ್ಯ ಈ ವರ್ಷ ಸರಳವಾಗಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿದ್ದು, ಮೇ 13 ರಂದು ಸರ್ಕಾರದ 3 ವರ್ಷದ ಸಾಧನೆ ಕುರಿತ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.