ಮೈಸೂರು: ಈ ತಿಂಗಳು ಅಂತ್ಯದೊಳಗೆ ರಾಜ್ಯ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಮತ್ತೊಮ್ಮೆ ಭರವಸೆ ನೀಡಿದ್ದಾರೆ.
ಕಳೆದ ತಿಂಗಳು ಇದೇ ರೀತಿ ಹೇಳಿದ್ದ ಸಿಎಂ, ಬರ ಪ್ರವಾಸದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆಯನ್ನು ಒಂದು ತಿಂಗಳು ಮುಂದೂಡುವ ಮೂಲಕ ಸಚಿವ ಆಕಾಂಕ್ಷಿಗಳಿಗೆ ತೀವ್ರ ನಿರಾಶೆ ಮಾಡಿದ್ದರು. ಇದೀಗ ಮತ್ತೊಮ್ಮೆ ಅಂತಹದ್ದೇ ಭರವಸೆ ನೀಡಿದ್ದು, ಈ ಭಾರಿಯಾದರೂ ಸಂಪುಟ ವಿಸ್ತರಣೆಯಾಗುತ್ತಾ ಅಂತ ಆಕಾಂಕ್ಷಿಗಳು ಕಾಯುತ್ತಿದ್ದಾರೆ.
ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಈ ತಿಂಗಳೊಳಗೆ ಸಂಪುಟ ವಿಸ್ತರಣೆ ಮಾಡುತ್ತೇವೆ. ವಿಸ್ತರಣೆ ವೇಳೆ ಕೆಲವು ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ಸಂಪುಟ ವಿಸ್ತರಣೆಗೆ ಯಾವುದೇ ಮಾನದಂಡವಿಲ್ಲ. ಹೊಸಬರಿಗೆ ಅವಕಾಶ ನೀಡುವ ಉದ್ದೇಶದಿಂದ ಕೆಲವು ಸಚಿವರನ್ನು ಕೈಬಿಡಲಾಗುತ್ತಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.
ಮೂರು ವರ್ಷಗಳ ಆಡಳಿತ ನನಗೆ ತೃಪ್ತಿ ತಂದಿದೆ. ನಮ್ಮ ಸರ್ಕಾರದ ವಿರುದ್ಧ ಯಾವುದೇ ಗುರುತರ ಆರೋಪವಿಲ್ಲ. ಕೇವಲ ರಾಜಕೀಯ ಉದ್ದೇಶಕ್ಕಾಗಿ ಆರೋಪ ಮಾಡಲಾಗಿದೆ.ಭರವಸೆಗಳ ಜೊತೆಗೆ ಹೊಸ ಕಾರ್ಯಕ್ರಮಗಳನ್ನುನೀಡಿದ್ದೇವೆ . 160 ಭವರವಸೆಗಳಲ್ಲಿ 120 ಭರವಸೆಗಳು ಈಡೇರಿವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದೇ ವೇಳೆ, ಹೈಕಮಾಂಡ್ ಸೂಚನೆಯ ಮೇರಗೆ ನಿಗಮ ಮಂಡಳಿ ಅಧ್ಯಕ್ಷರ ಅವಧಿಯನ್ನು 3 ತಿಂಗಳು ವಿಸ್ತರಿಸಲಾಗಿದೆ. 3 ತಿಂಗಳ ಬಳಿಕ ಹೊಸಬರಿಗೆ ಅವಕಾಶ ನೀಡುತ್ತೇವೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics