ಮೈಸೂರು: ಪಂಚರಾಜ್ಯಗಳ ವಿಧಾನ ಸಭೆ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದ ಗೆಲುವು ಸಾಧಿಸಲು ಸಾಧ್ಯವಾಗದಿರುವ ಕಾಂಗ್ರೆಸ್, ಕೆಪಿಸಿಸಿಗೆ ನೂತನ ಅಧ್ಯಕ್ಷರ ಹುಡುಕಾಟದಲ್ಲಿ ತೊಡಗಿದೆ.
ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ಕೇಂದ್ರ ಕಾಂಗ್ರೆಸ್ ಪಕ್ಷ ಸಂಘಟನೆಗಾಗಿ ಪೂರ್ಣ ಬದಲಾವಣೆ ತರಲು ಹೊರಟಿದೆ.
ಹಲವು ತಿಂಗಳ ಹಿಂದೆಯೇ ಜಿ. ಪರಮೇಶ್ವರ್ ಅವರ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಅವಧಿ ಮುಗಿದಿದೆ. ಆದರೂ ಕೂಡ ಬಿಬಿಎಂಪಿ ಮತ್ತು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳ ಚುನಾವಣೆ ಅವರ ನೇತೃತ್ವದಲ್ಲಿಯೇ ನಡೆಯಿತು.
ರಾಜ್ಯ ಸರ್ಕಾರ ಮತ್ತು ಪಕ್ಷದ ನಡುವೆ ಸರಿಯಾದ ಹೊಂದಾಣಿಕೆ ಇಲ್ಲದಿರುವುದು, ಕೆಪಿಸಿಸಿಗೆ ಹೊಸ ಅಧ್ಯಕ್ಷರನ್ನು ನೇಮಿಸದೇ ಹಲವು ತಿಂಗಳಿಂದ ಪಕ್ಷ ರಜಾ ಮೂಡ್ ನಲ್ಲಿರುವುದು ಎದ್ದು ಕಾಣುತ್ತಿದೆ.
ಬಿಜಪಿ ಲಿಂಗಾಯತ ಸಮುದಾಯ ಬಿ.ಎಸ್ ಯಡಿಯೂರಪ್ಪ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿರುವ ಹಿನ್ನೆಲೆಯಲಲ್ಲಿ ಕಾಂಗ್ರೆಸ್ ಪ್ರಭಾವಶಾಲಿ ಸಮುದಾಯದ ಮಧ್ಯ ವಯಸ್ಸಿನ ನಾಯಕನನ್ನು ಕೆಪಿಸಿಸಿಗೆ ಅಧ್ಯಕ್ಷರನ್ನಾಗಿ ನೇಮಿಸಲು ಮುಂದಾಗಿದೆ. ಹೀಗಾಗಿ ಅಂತಹ ಪ್ರಭಾವಶಾಲಿ ನಾಯಕನನ್ನು ಹುಡುಕಾಡುತ್ತಿದೆ.
ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಎಂದರೇ ಸಹಜವಾಗಿ ಕಣ್ಣು ಮುಂದೆ ಬರುವುದು ಇಂಧನ ಸಚಿವ ಡಿ.ಕೆ ಶಿವಕುಮಾರ್. 2018ರ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಸ್ ಕೃಷ್ಣ ಅವರ ನೀಲಿಗಣ್ಣಿನ ಹುಡುಗ ಡಿ.ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಕವಾಗೋ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಪಕ್ಷ ಸಂಘಟನೆಯಲ್ಲಿ ಚತುರರಾಗಿರುವ ಡಿಕೆಶಿ, ಸಿಎಂ ಸಿದ್ದರಾಮಯ್ಯನವರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಹಳೇ ಮೈಸೂರು ಪ್ರಾಂತ್ಯದಲ್ಲಿ ಒಕ್ಕಲಿಗರ ಪ್ರಾಬಲ್ಯವಿದ್ದು, ಡಿಕೆಶಿ ಅಧ್ಯಕ್ಷರಾದರೇ ಒಕ್ಕಲಿಗರ ಮತ ಪಡೆಯಲು ಸಾಧ್ಯವಾಗುತ್ತದೆ ಎಂಬುದು ಪಕ್ಷದ ತಂತ್ರವಾಗಿದೆ,
ಪಕ್ಷ ಸಂಘಟನೆಗೆ ಅವಶ್ಯವಿರುವ ಎಲ್ಲಾ ಗುಣಗಳು ಡಿಕೆಶಿವಕುಮಾರ್ ಅವರಿಗಿದ್ದು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅವರೇ ನೇಮಕಗೊಳ್ಳುವುದು ಬಹುತೇಕ ಖಚಿತವಾಗಿದೆ.