ನಿರ್ಮಲಾ ಸೀತಾರಾಮನ್ - ವಿ.ಸೋಮಣ್ಣ
ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ.
ರಾಜ್ಯಸಭೆಗೆ ಕರ್ನಾಟಕದಿಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ವಿಧಾನ ಪರಿಷತ್ ಗೆ ಮೊದಲ ಅಭ್ಯರ್ಥಿಯಾಗಿ ಮಾಜಿ ಸಚಿವ ವಿ.ಸೋಮಣ್ಣ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದೆ.
ಪ್ರತಿ ಬಾರಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತಿದ್ದ ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು ಅವರಿಗೆ ಈ ಬಾರಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರನ್ನು ರಾಜ್ಯದಿಂದ ರಾಜಸ್ಥಾನಕ್ಕೆ ಎತ್ತಂಗಡಿ ಮಾಡಲಾಗಿದೆ. ವೆಂಕಯ್ಯ ನಾಯ್ಡು ಅವರನ್ನು ಈ ರಾಜಸ್ಥಾನ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗುತ್ತಿದ್ದು, ಅವರ ಸ್ಥಾನಕ್ಕೆ ನಿರ್ಮಲಾ ಸೀತಾರಾಮನ್ ಅವರನ್ನು ತರಲಾಗಿದೆ.
ಈ ಚುನಾವಣೆಗೆ ನಾಮಪತ್ರ ಸಲ್ಲಿಸಲು ಈ ತಿಂಗಳು 31 ಕೊನೆಯ ದಿನವಾಗಿದ್ದು, ಬಿಜೆಪಿಯ ವಿ.ಸೋಮಣ್ಣ, ನಿರ್ಮಲಾ ಸೀತಾರಾಮನ್ ಸೇರಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಬಹುತೇಕ ಅಭ್ಯರ್ಥಿಗಳು ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ.
ಪ್ರತಿ ನಾಮಪತ್ರಕ್ಕೂ 10 ಜನ ಶಾಸಕರು ಸೂಚಕರಾಗಿ ಸಹಿ ಮಾಡಬೇಕು. ರಾಜ್ಯಸಭೆಗೆ ಇದುವರೆಗೂ ಯಾರೂ ನಾಮಪತ್ರ ಸಲ್ಲಿಸಿಲ್ಲ. ಆದರೆ ವಿಧಾನ ಪರಿಷತ್ ಗೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಅನಿಲ್ ಕುಮಾರ್ ಎಂಬುವವರು ನಾಮಪತ್ರ ಸಲ್ಲಿಸಿದ್ದು, ಅವರ ನಾಮಪತ್ರಕ್ಕೆ 10 ಜನ ಪಕ್ಷೇತರ ಶಾಸಕರು ಸೂಚಕರಾಗಿ ಸಹಿ ಹಾಕಿದ್ದಾರೆ.