ಶಂಕು ಸ್ಥಾಪನೆ ನೆರವೇರಿಸಿ ಮಾತನಾಡುತ್ತಿರುವ ಸಿಎಂ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ತಮ್ಮ ಎರಡನೇ ಪುತ್ರ ಡಾ.ಯತೀಂದ್ರನಿಗೂ ರಾಜಕೀಯವಾಗಿ ಬೆಂಬಲ ನೀಡಿ ಎಂದು ಜನತೆಯಲ್ಲಿ ಮನವಿ ಮಾಡುವ ಮೂಲಕ ತಮ್ಮ ಎರಡನೇಯ ಪುತ್ರನ ರಾಜಕೀಯ ಭವಿಷ್ಯಕ್ಕೆ ಅಡಿಗಲ್ಲು ಹಾಕಿದ್ದಾರೆ.
ಇಂದು ಮೆಲ್ಲಹಳ್ಳಿಯಲ್ಲಿ ನಡೆದ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಇನ್ನೂ ಮುಂದೆ ವರುಣಾ ಕ್ಷೇತ್ರದ ಸಂಪೂರ್ಣ ಜವಾಬ್ದಾರಿಯನ್ನು ನನ್ನ ಎರಡನೇಯ ಪುತ್ರ ಡಾ.ಯತಿಂದ್ರ ನೋಡಿಕೊಳ್ಳುತ್ತಾನೆ. ಆತನಿಗೆ ರಾಜಕೀಯ ಅನುಭವ ಇಲ್ಲ. ಹೀಗಾಗಿ ತಮ್ಮೆಲ್ಲರ ಆಶೀರ್ವಾದ ಹಾಗೂ ಬೆಂಬಲ ಅತನಿಗೆ ಬೇಕು ಎಂದರು.
ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಅವರ ಪುತ್ರ ಡಾ.ಯತಿಂದ್ರ ಸಹ ಉಪಸ್ಥಿತರಿದ್ದರು.
ಸಿದ್ದರಾಮಯ್ಯ ಅವರ ಜೇಷ್ಠಪುತ್ರ ರಾಕೇಶ್ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ಅವರ ಎರಡನೆಯ ಪುತ್ರ ಡಾ.ಯತೀಂದ್ರ ಅವರು ರಾಜಕೀಯಕ್ಕೆ ಬರಬೇಕು ಎಂದು ಅವರ ಬೆಂಬಲಿಗರು ಇತ್ತೀಚಿಗಷ್ಟೇ ಒತ್ತಾಯಿಸಿದ್ದರು.
ಸತ್ತವರ ವೋಟನ್ನೂ ನನಗೆ ಹಾಕಿದ್ದೀರಿ!
1977ರಿಂದಲೂ ನೀವು ನನಗೆ ನೂರಕ್ಕೆ ನೂರರಷ್ಟು ಮತ ಹಾಕುತ್ತ ಬಂದಿದ್ದೀರಿ... ಸತ್ತವರ ವೋಟನ್ನೂ ನನಗೆ ಹಾಕಿದ್ದೀರಾ...ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನ ಕೆಂಪೇಗೌಡನಹುಂಡಿ ಗ್ರಾಮಸ್ಥರಿಗೆ ಮೆಚ್ಚುಗೆ ಸೂಚಿಸಿ ಮಾತನಾಡುತ್ತ ವಿವಾದಕ್ಕೆ ಸಿಲುಕಿದ್ದಾರೆ.
ಇಂದು ಕೆಂಪೇಗೌಡನಹುಂಡಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗ್ರಾಮಸ್ಥರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಾಲೂಕು ಅಭಿವೃದ್ಧಿ ಮಂಡಳಿಗೆ ಸ್ಪರ್ಧಿಸಿದಾಗಿನಿಂದಲೂ ನೀವು ನನ್ನ ಬೆಂಬಲಿಸಿದ್ದೀರಾ. ಹಾಗಾಗಿ ನಿಮಗೆ ಎಷ್ಟು ಧನ್ಯವಾದ ಅರ್ಪಿಸಿದರು ಸಾಲದು ಎಂದರು.
1977ರಿಂದಲೂ ಬೆಂಬಲಿಸುತ್ತ ಬಂದಿದ್ದೀರಿ. ಉಪಚುನಾವಣೆಯಲ್ಲೂ ನೂರಕ್ಕೆ ನೂರರಷ್ಟು ವೋಟ್ ಹಾಕಿದ್ದೀರಿ. 687ಕ್ಕೆ 687 ವೋಟ್ ಹಾಕಿದ್ದೀರಿ. ಸತ್ತವರ ವೋಟನ್ನು ಸೇರಿಸಿ ಹಾಕಿದ್ದೀರಿ ಎಂದು ಹೇಳಿದರು.