ದಾವಣಗೆರೆ: ರಾಜ್ಯ ಬಿಜೆಪಿಯಲ್ಲಿ ಸಾಕಷ್ಟು ಗೊಂದಲಕ್ಕೆ ಕಾರಣವಾಗಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಿತ್ತಾಟ ಮುಂದುವರೆದಿದ್ದು, ಬ್ರಿಗೇಡ್ ಸ್ಥಗಿತಗೊಳಿಸುವಂತೆ ನಮ್ಮ ಪಕ್ಷದ ವರಿಷ್ಠರು ನನಗೆ ಯಾವುದೇ ಸೂಚನೆ ನೀಡಿಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರು ಬುಧವಾರ ಹೇಳಿದ್ದಾರೆ.
ಇಂದು ದಾವಣಗೆರೆ ಜಿಲ್ಲೆಯ ಶಿರಮಗೊಂಡನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ನಾನು ರಾಯಣ್ಣ ಬ್ರಿಗೇಡ್ ಜತೆಗೆ ಇರ್ತೇನೆ. ಈ ಬಗ್ಗೆ ವರಿಷ್ಠರು ಯಾವುದೇ ಸೂಚನೆ ನೀಡಿಲ್ಲ. ಹೀಗಾಗಿ ಆ ಬಗ್ಗೆ ಯಾವುದೇ ಅನುಮಾನ ಬೇಡ. ರಾಯಣ್ಣ ಬ್ರಿಗೇಡ್ ಎಂಬುದು ರಾಜಕೀಯೇತರ ಸಂಘಟನೆ ಎಂದು ಹೇಳಿದರು.
ಇದೇ ವೇಳೆ ರಾಜ್ಯ ಬಿಜೆಪಿಯಲ್ಲಿ ಗೊಂದಲಗಳಿವೆ ಎಂದಿರುವ ಈಶ್ವರಪ್ಪ, ಯಡಿಯೂರಪ್ಪನವರು ಏಕಪಕ್ಷೀಯವಾದ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಈ ಬಗ್ಗೆ ಚರ್ಚೆ ನಡೆಸುವಂತೆ ವರಿಷ್ಠರು ಸೂಚಿಸಿದ್ದರು. ರಾಯಣ್ಣ ಬ್ರಿಗೇಡ್ ಹಿಂದುಳಿದವರು, ದಲಿತರ ಪರ ಕೆಲಸ ಮಾಡುವುದಕ್ಕೆ ಹುಟ್ಟಿಕೊಂಡಿರುವ ಸಂಘಟನೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಯಣ್ಣ ಬ್ರಿಗೇಡ್ ಜತೆಗೆ ಗುರುತಿಸಿಕೊಳ್ಳದಂತೆ ನನಗೆ ಯಾವುದೇ ಸೂಚನೆ ಬಂದಿಲ್ಲ ಎಂದು ಹೇಳುವ ಮೂಲಕ ಈಶ್ವರಪ್ಪ ಅವರು ಮತ್ತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನ ಅವರಿಗೆ ಸಡ್ಡು ಹೊಡೆದಿದ್ದಾರೆ.