ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆಯಲ್ಲಿ ಕಿಂಗ್ ಮೇಕರ್ ಆಗಿದ್ದ ಜೆಡಿಎಸ್ ಈಗ ಮತ್ತೆ ಕಿಂಗ್ ಆಗಲು ಹೊರಟಿದೆ.
ಹೌದು. ಬಿಬಿಎಂಪಿಯಲ್ಲಿ ಮೇಯರ್ ಸ್ಥಾನವನ್ನು ನಮ್ಮ ಪಕ್ಷಕ್ಕೆ ನೀಡುವವರೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪರೋಕ್ಷವಾಗಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಮೈತ್ರಿ ಷರತ್ತು ಮುಂದಿಟ್ಟಿದ್ದಾರೆ.
ಈ ಸಂಬಂಧ ಇಂದು ತಮ್ಮ ಪದ್ಮನಾಭನಗರದಲ್ಲಿನ ನಿವಾಸದಲ್ಲಿ ಪಕ್ಷದ ಬಿಬಿಎಂಪಿ ಕಾರ್ಪೊರೇಟರಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡರು, ಜೆಡಿಎಸ್‌ಗೆ ಮೇಯರ್ ಸ್ಥಾನ ಬಿಟ್ಟು ಕೊಡುವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲಾಗುವುಗು ಎಂದು ಪರೋಕ್ಷವಾಗಿ ಹೇಳಿದರು.
ಜೆಡಿಎಸ್ 14 ಸದಸ್ಯರ ಜತೆ ಮಾತುಕತೆ ನಡೆಸಿದ್ದು, ಒಂದು ವರ್ಷದಲ್ಲಿ ಅವರಿಗೆ ಏನೇನು ಸಹಕಾರ ಸಿಕ್ಕಿದೆ. ಏನೇನು ಸಮಸ್ಯೆ ಆಗಿದೆ ಎಂದು ತಿಳಿದುಕೊಂಡಿದ್ದೇನೆ. ಏನು ನೋವು ಉಂಡಿದ್ದಾರೆ? ಕಾಮಗಾರಿಗೆ ಸಹಕಾರ ಸಿಕ್ಕಿದೆಯಾ? ಕೇಳಿ ತಿಳಿದುಕೊಂಡಿದ್ದೇನೆ. ಮೇಯರ್ ಸ್ಥಾನವನ್ನು ಯಾಕೆ ಕೇಳಬಾರದು ಎಂಬ ಅಭಿಪ್ರಾಯ ಸಹ ಸಭೆಯಲ್ಲಿ ವ್ಯಕ್ತವಾಗಿದೆ. 12 ಸ್ಥಾಯಿ ಸಮಿತಿಗಳ ಪೈಕಿ ಕಳೆದ ಬಾರಿ ಕೇವಲ 2 ಸ್ಥಾನ ನೀಡಿದ್ದರ ಬಗ್ಗೆಯೂ ಅಸಮಾಧಾನ ವ್ಯಕ್ತವಾಗಿದೆ ಎಂದರು.
ಬಿಬಿಎಂಪಿ ಚುನಾವಣೆಯಲ್ಲಿ 14 ಸದಸ್ಯರು ಸೇರಿದಂತೆ ನಮಗೆ 24 ಮತಗಳಿವೆ. ಕಳೆದ ಬಾರಿ ಮೇಯರ್ ಸ್ಥಾನ ಬಿಟ್ಟುಕೊಟ್ಟಿದ್ದೇವೆ. ಈ ಬಾರಿ ಮೇಯರ್ ಸ್ಥಾನ ನಮಗೆ ಬೇಕು ಎಂದು ಕುಮಾರಸ್ವಾಮಿ ಸಹ ಹೇಳಿದ್ದಾರೆ ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಬಿಜೆಪಿ ಮುಖಂಡರು ಸಂಪರ್ಕದಲ್ಲಿ ಇರುವುದು ಸತ್ಯ. ಕಾಂಗ್ರೆಸ್‌ನಿಂದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನನ್ನೊಂದಿಗೆ ಮಾತನಾಡಿದ್ದಾರೆ. ಆದರೆ, ಇನ್ನೂ ನಾವು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಎಲ್ಲ ಸದಸ್ಯರು ದೇವೇಗೌಡ ಹಾಗೂ ಕುಮಾರಸ್ವಾಮಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದ ಎಂದು ಹೇಳಿದ್ದಾರೆ. ಹಾಗಾಗಿ ಕುಮಾರಸ್ವಾಮಿ ಜತೆ ಚರ್ಚಿಸಿ ಅಂತಿಮ ನಿರ್ಧಾರವನ್ನು ನಾವು ಪ್ರಕಟಿಸುತ್ತೇವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics