ಕೋಝಿಕೋಡ್: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಟಾಂಗ್ ನೀಡಲು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರು ಸ್ಥಾಪಿಸಿದ್ದ ಸಂಗೋಳ್ಳಿ ರಾಯಣ್ಣ ಬ್ರಗೇಡ್ ಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಬೆಂಬಲ ಸೂಚಿಸಿದ್ದಾರೆ.
ಕೋಝಿಕೋಡ್ ನಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ರಾಯಣ್ಣ ಬ್ರಿಗೇಡ್ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರ ಗಮನ ಸೆಳೆಯುವಂತೆ ಮಾಡಿದರು. ಆದರೆ ಯಡಿಯೂರಪ್ಪ ಅವರಿಂದ ಮಾಹಿತಿ ಪಡೆದ ಅಮಿತ್ ಶಾ ಅವರು, ರಾಯಣ್ಣ ಬ್ರಿಗೇಡ್ ಅನ್ನು ನಕಾರಾತ್ಮಕವಾಗಿ ಬಿಂಬಿಸಬೇಡಿ ಎಂದು ಸೂಚಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಅಕ್ಟೋಬರ್ 6ರಂದು ಯಡಿಯೂರಪ್ಪ ಅವರು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಕರೆದಿದ್ದು, ಅಂದು ಈ ವಿಷಯ ಮತ್ತೆ ಪ್ರಸ್ತಾಪಿಸುವ ಸಾಧ್ಯತೆ ಇದೆ.
ಸಂಗೋಳ್ಳಿ ರಾಯಣ್ಣ ಬ್ರಿಗೇಡ್ ಕೃಪಾ ಪೋಷಕರಾಗಿರುವ ಕೆ.ಎಸ್ ಈಶ್ವರಪ್ಪ ಅವರು ಪಕ್ಷದ ಹಿತದಿಂದ ಮತ್ತು ಎಲ್ಲಾ ಹಿಂದುಳಿದ ಸಮುದಾಯವನ್ನು ಪಕ್ಷಕ್ಕೆ ಕರೆ ತರುವ ಉದ್ದೇಶದಿಂದಲೆ ಬ್ರಿಗೇಡ್ ಹುಟ್ಟು ಹಾಕಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ರಾಯಣ್ಣ ಬ್ರಿಗೇಡ್ ಗೂ ಪಕ್ಷಕ್ಕೂ ಯಾವದೇ ಸಂಭಂದವಿಲ್ಲ ಎಂದು ಯಡಿಯೂರಪ್ಪ ಹೇಳುತ್ತಿದ್ದು, ನೂತನ ಬ್ರಿಗೇಡ್ ಪಕ್ಷದ ಇಬ್ಬರು ಹಿರಿಯ ನಾಯಕರ ನಡುವಿನ ಕಲಹಕ್ಕೆ ಕಾರಣವಾಗಿತ್ತು.