ಎಚ್.ಡಿ ದೇವೇಗೌಡ ಮತ್ತು ಬಸವರಾಜ ಹೊರಟ್ಟಿ
ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಪಕ್ಷವನ್ನು ಬಲವರ್ಧಿಸುವ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರಿಗೆ ಪಕ್ಷದ ಶಾಸಕ ಬಸವರಾಜ ಹೊರಟ್ಟಿ ಅವರು ಬಹಿರಂಗ ಪತ್ರ ಬರೆದಿದ್ದಾರೆ.
ರಾಜ್ಯದ ಜನ ಜೆಡಿಎಸ್ ಗೆ ಮತ ಹಾಕಲು ತಯಾರಾಗಿದ್ದಾರೆ, ಆದರೆ ಮತ ಹಾಕಿಸಿಕೊಳ್ಳುವವರು ಇನ್ನೂ ತಯಾರಾಗಿಲ್ಲ ಎಲ್ಲ ಜಾತಿ ನಾಯಕರನ್ನು ಗುರುತಿಸಿ ಸಂಘಟನೆ ಜವಾಬ್ದಾರಿ ವಹಿಸಿದರೇ ಪಕ್ಷ ಸಬಲವಾಗುತ್ತದೆ ಎಂದು ಬರೆದಿದ್ದಾರೆ.
ರಾಜ್ಯ ವಿಧಾನ ಪರಿಷತ್ತಿನ ಹಿರಿಯ ಸದಸ್ಯ ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರು ಪಕ್ಷದ ಸಂಘಟನೆ ವಿಚಾರದಲ್ಲಿ ತಮ್ಮ ಅಭಿಪ್ರಾಯವನ್ನು ವರಿಷ್ಠರ ಜೊತೆ ನೇರವಾಗಿ ಚರ್ಚಿಸದೇ ಪತ್ರ ಬರೆದಿರುವುದು ಕೂತುಹಲಕ್ಕೆ ಕಾರಣವಾಗಿದೆ,
ಬಿಜೆಪಿ ಉತ್ತರ ಪ್ರದೇಶದ ಮಾದರಿ ಅನುಸರಿಸಿಯೇ ರಾಜ್ಯ ವಿಧಾನ ಸಭೆ ಚುನಾವಣೆ ಎದುರಿಸುತ್ತಿದೆ. ರಾಜ್ಯದಲ್ಲಿ ಉತ್ತರ ಪ್ರದೇಶದ ರೀತಿ ಆಗುವುದಿಲ್ಲ, ಸುಶಿಕ್ಷಿತರು, ಸರ್ಕಾರಿ ನೌಕರರು, ಸಾಮಾನ್ಯ ಜನರು, ರೈತರು ಈ ಬಾರಿ ಜೆಡಿಎಸ್ ಗೆ ಮತ ಕೊಡಲು ತಯರಾಗಿದ್ದಾರೆ. ಈ ಅವಕಾಶ ಬಳಸಿಕೊಂಡು ಪಕ್ಷ ಸಂಘಟನೆಯನ್ನು ಇನ್ನೂ ಗಟ್ಟಿಗೊಳಿಸಲು ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ಕೆಲವು ಪ್ರಮುಖ ಸಲಹೆಗಳನ್ನು ಜೆಡಿಎಸ್ ಹಿತೈಷಿ ಸ್ನೇಹಿತರು ನೀಡಿದ್ದಾರೆ. ಯಾವುದೇ ಸ್ವಾರ್ಥ, ಆಸೆ ಆಮೀಷ ಇಲ್ಲದೇ ಈ ಎಲ್ಲಾ ಅಭಿಪ್ರಾಯಗಳನ್ನು ತಮ್ಮ ಮುಂದಿಡುತ್ತಿದ್ದೇನೆ ಎಂದು ಅವರು ಪತ್ರದಲ್ಲಿ ಸ್ಪಷ್ಟ ಪಡಿಸಿದ್ದಾರೆ.
ಎಲ್ಲಾ ಜಾತಿ ನಾಯಕರನ್ನು ಗುರುತಿಸಿ ಪಕ್ಷ ಸಂಘಟನೆ ಕೆಲಸಕ್ಕೆತಕ್ಷಣ ನಿಯೋಜಿಸಬೇಕು, ಪ್ರತಿ ಜಿಲ್ಲೆಗೊಂದು ಕಚೇರಿ ವ್ಯವಸ್ಥೆ ಮಾಡಿ, ಸಂಘಟನೆಗೆ ಅಗತ್ಯ ಸೌಲಭ್ಯ ಕಲ್ಪಿಸಿಕೊಡಬೇಕು. ಚುನಾವಣೆ ಬಂದಾಗ ಹಣ ಖರ್ಚು ಮಾಡುವುದಕ್ಕಿಂತ ಈಗಿನಿಂದಲೇ ವ್ಯವಸ್ಥಿತ ತಯಾರಿ ಮಾಡಿಕೊಳ್ಳಬೇಕು. ಯುವಜನರಿಗೆ ಯಾವ ಯೋಜನೆ ಕೊಡುತ್ತೀರಿ, ನಿರುದ್ಯೋಗ ನಿವಾರಣೆಯ ಚಿಂತನೆ ಸ್ಪಷ್ಟಪಡಿಸಬೇಕು, ಸ್ಲಂ ಜನರ ಪರವಾದ ಕಾರ್ಯಕ್ರಮಗಳ ಸ್ಪಷ್ಟ ಸಂದೇಶ ನೀಡಬೇಕು. ದೇವೇಗೌಡ ಮತ್ತು ಕುಮಾರಸ್ವಾಮಿ ಅಧಿಕಾರವಧಿಯಲ್ಲಿ ಕೈಗೊಂಡ ರೈತ ಪರ ಕೆಲಸಗಳ ಮನವರಿಕೆಗೆ ಕಾರ್ಯತಂತ್ರ ರೂಪಿಸಬೇಕು, ಉತ್ತರ ಪ್ರದೇಶ ಚುನಾವಣೆಗೆ ಆರು ತಿಂಗಳು ಮೊದಲೇ ಬಿಜೆಪಿ ಪ್ರತಿ ಹಳ್ಳಿಯಲ್ಲೂ ಸಣ್ಣ ಗುಂಪು ರಚಿಸಿದಂತೆ ನಮ್ಮಲ್ಲೂ ಆಗಬೇಕು, ಜನರಿಗೆ ಉತ್ತರ ಸರ್ಕಾರ ನೀಡುವ ಸಂದೇಶ ರವಾನಿಸಬೇಕು ಎಂದು ಪತ್ರದಲ್ಲಿ ಹೊರಟ್ಟಿ ವಿವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics