ಬೆಂಗಳೂರು: ಹಲವು ಸೋಲಿನಿಂದ ಕಂಗೆಟ್ಟಿದ್ದ ಕಾಂಗ್ರೆಸ್ 2 ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶದಲ್ಲಿ ಜಯಗಳಿಸಿ ಬೀಗುತ್ತಿದೆ. ಉಪ ಚುನಾವಣೆ ಫಲಿತಾಂಶದಿಂದ ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಕಾಂಗ್ರೆಸ್ ಗೆ ಆತ್ಮ ವಿಶ್ವಾಸ ಮೂಡಿದೆ.
ಮುಂಬರುವ 2018ರ ಚುನಾವಣೆಗೆ ಉಪಚುನಾವಣೆ ಪಲಿತಾಂಶ ದಿಕ್ಸೂಚಿಯಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಅರ ಕುರ್ಚಿಯನ್ನು ಬಲಪಡಿಸಿದೆ, ಜೊತೆಗೆ ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದೆ. ಕಾಂಗ್ರೆಸ್ ನಾಯಕರ ಸಾಮೂಹಿಕ ವಲಸೆಗೆ ಬ್ರೇಕ್ ಹಾಕಿದೆ.
ಉಪಚುನಾವಣೆ ಮೊದಲು ಕಾಂಗ್ರೆಸ್ ಪಕ್ಷ ತನ್ನ ಆತ್ಮ ವಿಶ್ವಾಸ ಕಳೆದುಕೊಂಡಿತ್ತು. ಆದರೆ ಫಲಿತಾಂಶದ ನಂತರ ಬಿಜೆಪಿ ವಿರುದ್ಧ ಚುನಾವಣೆಯಲ್ಲಿ ಆಕ್ರಮಣಕಾರಿ ಪೈಪೋಟಿ ನೀಡಲು ಸಿದ್ಧತೆ ನಡೆಸುತ್ತಿದೆ ಎಂದು ಮೈಸೂರು ವಿವಿಯ ರಾಜ್ಯಶಾಸ್ತ್ರ ಪ್ರೊ. ಮುಜಾಫರ್ ಆಸಾದಿ ಹೇಳಿದ್ದಾರೆ.
ಉಪ ಚುನಾವಣೆ ಫಲಿತಾಂಶ ಸರ್ಕಾರದ ಉತ್ತಮ ಆಡಳಿತದಿಂದಾಗಿ ಜನತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾರೆ ಎಂಬುದು ಸಾಬೀತಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಲಿಂಗಾಯತ ಸಮುದಾಯದ ಬೆಂಬಲವಿದೆ ಎಂಬ ವಿಶ್ವಾಸದಿಂದ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದು ಹೇಳಿಕೊಂಡಿದ್ದ ಪಕ್ಷ ಲಿಂಗಾಯಿತ ಸಮುದಾಯ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲೇ ಸೋಲನುಭವಿಸಿದೆ ಎಂದು ಹೇಳಿದ್ದಾರೆ.
2018 ರ ವಿಧಾನಸಭೆ ಚುನಾವಣೆಯ ಸಿದ್ಧತೆ ವೇಗ ಹೆಚ್ಚಿಸಲು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಹೊಸಬರನ್ನು ನೇಮಿಸುವ ಅವಶ್ಯಕತೆಯಿದೆ. ಸತತ ಎರಡು ಬಾರಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಅಧಿಕಾರ ನಿರ್ವಹಿಸಿರುವ ಪರಮೇಶ್ವರ್ ಮತ್ತೆ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಯುವ ಉದ್ದೇಶದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಬಯಸಿದ್ದಾರೆ ಎನ್ನಲಾಗಿದೆ, ಜೊತಗೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ ಎನ್ನುವುದು ರಹಸ್ಯವಾಗಿ ಉಳಿದಿಲ್ಲ.
ಲಿಂಗಾಯತ ಸಮುದಾಯದ ಪ್ರಬಲ ಮುಖಂಡನಾಗಿರುವ ಮಾಜಿ ಸಚಿವ ಎಸ್ ಆರ್ ಪಾಟೀಲ್ ಅಥವಾ ಜಲ ಸಂಪನ್ಮೂಲ ಸಚಿವ ಎಂ. ಬಿ ಪಾಟೀಲ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಲು ಸಿಎಂ ಸಿದ್ದರಾಮಯ್ಯ ಆಸಕ್ತಿ ವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಪಿಸಿಸಿ ಹೊಸ ಅಧ್ಯಕ್ಷರ ನೇಮಕಾತಿಯಿಂದ ಸಮಸ್ಯೆ ಉದ್ಭವವಾಗುತ್ತದೆ. ಎಐಸಿಸಿ ಪ್ರಧಾನಿ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು ಮುಂದಿನ ವಿಧಾನಸಭೆ ಚುನಾವಣೆ ಸಿದ್ದರಾಮಯ್ಯ ನೇತೃತ್ವದಲ್ಲೇ ನಡೆಯಲಿದೆ ಎಂದು ತಿಳಿಸಿದ್ದಾರೆ. ಆದರೆ ಈ ಪ್ರಕಟಣೆ ನಂತರ ಜಿ.ಪರಮೇಶ್ವರ್ ಮತ್ತು ಡಿ.ಕೆ ಶಿವಕುಮಾರ್ ತಮ್ಮ ಕಟು ಟೀಕೆಗಳ ಮೂಲಕ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಪಕ್ಷವನ್ನು ಪುನರ್ ಸಂಘಟಿಸುವ ಜೊತೆಗೆ ಕಾಂಗ್ರೆಸ್ ನಲ್ಲಿರುವ ಆಂತರಿಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವ ಅವಶ್ಯಕತೆಯೂ ಇದೆ. ಕಾಂಗ್ರೆಸ್ ಮತ್ತು ಬಿಜೆಪಿ ಒಟ್ಟಾಗಿ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುತ್ತಾರಾ ಎಂಬ ಕುತೂಹಲ ಕೂಡ ಮೂಡಿದೆ.
ಕಾಂಗ್ರೆಸ್ ಪಕ್ಷದ ಹಲವು ಭಾಗ್ಯ ಯೋಜನೆಗಳು, ನಗರದ ಕೊಳಚೆ ಪ್ರದೇಶ ಜನರಿಗೆ ಉಚಿತ ನೀರು ಪೂರೈಕೆ, ನಮ್ಮ ಕ್ಯಾಂಟೀನ್ ಸೇರಿದಂತೆ ಹಲವು ಕಾರ್ಯಕ್ರಮಗಳು ಮೋದಿ-ಅಮಿತ್ ಷಾ ಚುನಾವಣಾ ಲೆಕ್ಕಾಚಾರವನ್ನು ಉಲ್ಟಾ ಮಾಡುತ್ತೆದೆಯೇ ಎಂದು ರಾಜಕೀಯ ತಜ್ಞ ಪ್ರೊ. ಸತ್ಯನಾರಾಯಣ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos