ಕಲಬುರಗಿ: ರಾಜ್ಯದಿಂದ ಕಾಂಗ್ರೆಸ್ ನ್ನು ಕಿತ್ತೊಗೆಯಿರಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬೆಂಗಳೂರಿನಲ್ಲಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮತ ಗಳಿಕೆಗಾಗಿ ಅಮಿತ್ ಶಾ ವಿಭಜನೆ ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ಆರೋಪಿಸಿದರು.
ನಿನ್ನೆ ಕಲಬುರಗಿಯ ಅಳಂದದಲ್ಲಿ ಮಿನಿ ವಿಧಾನ ಸೌಧಕ್ಕೆ ಶಂಕುಸ್ಥಾಪನೆ ನೆರವೇರಿಸಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮುಂದಿನ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಅಮಿತ್ ಶಾ ಕಾರ್ಯತಂತ್ರ ರೂಪಿಸುತ್ತಿದ್ದಾರಲ್ಲವೇ ಎಂಬ ಬಗ್ಗೆ ಸುದ್ದಿಗಾರರು ಪ್ರಶ್ನೆ ಕೇಳಿದಾಗ, ಈಗಿನಿಂದಲೇ ಬೇಕಾದರೆ ಪ್ರಧಾನ ಮಂತ್ರಿ ಮೋದಿ ಮತ್ತು ಅಮಿತ್ ಶಾ ಕರ್ನಾಟಕದಲ್ಲಿ ಪ್ರಚಾರ ಆರಂಭಿಸಲಿ. ಅವರ ಪ್ರಚಾರ ಅಥವಾ ಚುನಾವಣೆಯಲ್ಲಿ ಗೆಲ್ಲುವ ಕಾರ್ಯತಂತ್ರ ಕೆಲಸ ಮಾಡುವುದಿಲ್ಲ. ಬಿಜೆಪಿ ಏನು ಎಂಬುದು ರಾಜ್ಯದ ಜನತೆಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಅವಧಿಪೂರ್ವ ಚುನಾವಣೆ ನಡೆಯುವ ಸಾಧ್ಯತೆಯನ್ನು ಕೂಡ ತಳ್ಳಿ ಹಾಕಿದರು.
ಹಿಂದ ಅಂದರೆ ಹಿಂದುಳಿದವರು ಮತ್ತು ದಲಿತರನ್ನು ಸೆಳೆಯುವ ಬಿಜೆಪಿ ಪ್ರಯತ್ನ ಕೂಡ ಫಲ ನೀಡುವುದಿಲ್ಲ. ಯಾಕೆಂದರೆ ಬಿಜೆಪಿ ಸಾಮಾಜಿಕ ನ್ಯಾಯ ಹಾಗೂ ಬದ್ಧತೆಯನ್ನು ಹೊಂದಿಲ್ಲ ಎಂಬುದು ಈ ರಾಜ್ಯದ ಜನತೆಗೆ ಗೊತ್ತಿದೆ ಎಂದು ಟೀಕಿಸಿದರು.
ನಂತರ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅಣಕಿಸಿದರು. 2018ರ ವಿಧಾನಸಭೆ ಚುನಾವಣೆಯಲ್ಲಿ 150 ಸೀಟುಗಳನ್ನು ಗೆಲ್ಲಬೇಕೆಂಬ ಯಡಿಯೂರಪ್ಪನವರ ಯೋಜನೆಯಿದೆ. ಆದರೆ ಗೆಲ್ಲುವುದು ಮಾತ್ರ ಸುಮಾರು 50 ಸೀಟುಗಳನ್ನಷ್ಟೆ, ನೋಡುತ್ತಿರಿ ಎಂದರು.
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ಇತ್ತೀಚೆಗೆ ದಾಳಿ ನಡೆಸಿದ ಬಗ್ಗೆ ಪ್ರತಿಕ್ರಿಯಿಸಿ, ತಾವಾಗಲಿ, ಕಾಂಗ್ರೆಸ್ ಪಕ್ಷವಾಗಲಿ ಐಟಿ ದಾಳಿಯನ್ನು ವಿರೋಧಿಸುವುದಿಲ್ಲ. ಆದರೆ ಎನ್ ಡಿಎ ಸರ್ಕಾರ ಕಾಂಗ್ರೆಸ್ ನಾಯಕರನ್ನು ಮಾತ್ರ ಏಕೆ ಗುರಿಯಾಗಿಟ್ಟುಕೊಂಡಿದೆ ಎಂಬುದು ನಮ್ಮ ಪ್ರಶ್ನೆ. ಬಿಜೆಪಿಯ ಎಲ್ಲಾ ನಾಯಕರೇನು ಸತ್ಯ ಹರಿಶ್ಚಂದ್ರರೇ ಎಂದು ಪ್ರಶ್ನಿಸಿದರು.