ನಮ್ಮ ಪಕ್ಷ ಕರ್ನಾಟಕದಲ್ಲಿ ಮಿಷನ್ -150 ಸಾಧಿಸುತ್ತದೆ: ಬಿಎಸ್ ಯಡಿಯೂರಪ್ಪ
ಜಾತಿ ಆಧಾರದ ಮೇಲೆ ಸಮಾಜವನ್ನು ಒಡೆದು ಅಧಿಕಾರಕ್ಕೆ ಬರಲು ಹತಾಶೆಯಿಂದ ಪ್ರಯತ್ನಿಸುವ ಕಾಂಗ್ರೆಸ್ ಗೆ....
ಬೆಂಗಳೂರು: ಜಾತಿ ಆಧಾರದ ಮೇಲೆ ಸಮಾಜವನ್ನು ಒಡೆದು ಅಧಿಕಾರಕ್ಕೆ ಬರಲು ಹತಾಶೆಯಿಂದ ಪ್ರಯತ್ನಿಸುವ ಕಾಂಗ್ರೆಸ್ ಗೆ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಂತರ ನಿನ್ನೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಜಯದ ಸಾಧನೆಯೆಲ್ಲವೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಸಲ್ಲಬೇಕು. ನಾನು ಅವರಿಬ್ಬರನ್ನೂ ಅಭಿನಂದಿಸುತ್ತೇನೆ. ಅವರಿಬ್ಬರ ಸೂತ್ರಗಳು ಮುಂಬರುವ ಕರ್ನಾಟಕ ಚುನಾವಣೆಯಲ್ಲಿ ಕೂಡ ಕೆಲಸ ಮಾಡಲಿದೆ. ಕರ್ನಾಟಕದಲ್ಲಿ ಕೇಸರಿ ಪಕ್ಷ 150 ಸೀಟುಗಳನ್ನು ಗೆಲ್ಲಲಿದೆ.
ಇಂದಿನ ಫಲಿತಾಂಶ ಕರ್ನಾಟಕ ಕಾಂಗ್ರೆಸ್ ಮುಕ್ತ ರಾಜ್ಯವಾಗಲಿದೆ ಎಂಬುದನ್ನು ಸೂಚಿಸುತ್ತದೆ. ರಾಜ್ಯವೊಂದರ ಚುನಾವಣಾ ಫಲಿತಾಂಶ ಪ್ರಕಟಗೊಂಡಾಗ ಇಡೀ ದೇಶಾದ್ಯಂತ ಸಂಭ್ರಮಿಸುವುದನ್ನು ನೋಡುತ್ತಿರುವುದು ಅಪರೂಪ ಎಂದರು.
ಮೋದಿಯವರ ವರ್ಚಸ್ಸಿನ ಮುಂದೆ ರಾಹುಲ್ ಗಾಂಧಿ ಸಂಪೂರ್ಣ ವಿಫಲರಾಗಿದ್ದಾರೆ ಎಂಬುದನ್ನು ಬಿಜೆಪಿಯ ಗೆಲುವು ಸಾರುತ್ತದೆ. ಕಾಂಗ್ರೆಸ್ ಪಕ್ಷವನ್ನು ಉಳಿಸಲು ರಾಹುಲ್ ಗಾಂಧಿಯವರಿಂದ ಸಾಧ್ಯವಿಲ್ಲ. ನೋಟುಗಳ ಅಮಾನ್ಯತೆ ಮತ್ತು ಸರಕು ಮತ್ತು ಸೇವಾ ತೆರಿಗೆ ಜಾರಿಯನ್ನು ಋಣಾತ್ಮಕವಾಗಿ ತೋರಿಸಲು ಕಾಂಗ್ರೆಸ್ ಯತ್ನಿಸಿದರೂ ಕೂಡ ಮೋದಿ ಹಾಗೂ ಅಮಿತ್ ಶಾ ಅವರಿಂದಾಗಿ ಬಿಜೆಪಿಯನ್ನು ಸೋಲಿಸಲು ಜನತೆ ಬಿಡಲಿಲ್ಲ. ಕರ್ನಾಟಕವನ್ನು ಕೂಡ ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿ ಮಾಡುವ ಕನಸನ್ನು ನನಸು ಮಾಡುವತ್ತ ಇಬ್ಬರು ನಾಯಕರು ಕೂಡ ಗಮನ ಹರಿಸಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.
ಬಿಜೆಪಿ ಗೆದ್ದ ಸೀಟುಗಳ ಸಂಖ್ಯೆ ಕಡಿಮೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಒಂದು ಪಕ್ಷ ಅನೇಕ ವರ್ಷಗಳಿಂದ ಅಧಿಕಾರದಲ್ಲಿರುವಾಗ ಇಂತಹ ವಾತಾವರಣ ಕಂಡುಬರುವುದು ಸಹಜ ಎಂದರು. ವಿದ್ಯುನ್ಮಾನ ಮತ ಯಂತ್ರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಪಡಿಸಿದ ಸಂಶಯದ ಬಗ್ಗೆ ಮಾತನಾಡಿದ ಅವರು, ಮುಖ್ಯಮಂತ್ರಿಯವರ ಹೇಳಿಕೆ ಬಾಲಿಶವಾದುದು. ಸಿದ್ದರಾಮಯ್ಯನವರಿಗೆ ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಗೊತ್ತಿದೆ ಎಂದರು.
ಇದೇ ವಿದ್ಯುನ್ಮಾನ ಮತಯಂತ್ರಗಳ ಸಹಾಯದಿಂದ ಇತ್ತೀಚೆಗೆ ಗುಂಡ್ಲುಪೇಟೆ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಸಲಾಯಿತು.ಆಗ ಕಾಂಗ್ರೆಸ್ ಗೆದ್ದಿತು. ಹಾಗಾದರೆ ಸಿದ್ದರಾಮಯ್ಯನವರು ಈಗ ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಸಂಶಯ ವ್ಯಕ್ತಪಡಿಸಲು ಹೇಗೆ ಸಾಧ್ಯ ಎಂದು ಯಡಿಯೂರಪ್ಪ ಪ್ರಶ್ನಿಸಿದರು.
ಲಿಂಗಾಯತವನ್ನು ಪ್ರತ್ಯೇಕ ಧರ್ಮವೆಂದು ಘೋಷಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಶಿಫಾರಸು ಪ್ರಸ್ತಾವನೆ ಸಲ್ಲಿಸಲಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಅಖಿಲ ಭಾರತ ವೀರಶೈವ ಮಹಾಸಭಾ ಮತ್ತು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರು ತೆಗೆದುಕೊಂಡ ತೀರ್ಮಾನವನ್ನು ಬೆಂಬಲಿಸುವುದಾಗಿ ನಮ್ಮ ನಿಲುವನ್ನು ಈಗಾಗಲೇ ತಿಳಿಸಿದ್ದೇವೆ ಎಂದು ಹೇಳಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.