ಹುಬ್ಬಳ್ಳಿ: ಕೇಂದ್ರ ಉದ್ಯೋಗ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಅವರಿಗೆ ಸಂಸ್ಕೃತಿ ಇಲ್ಲ. ರಾಜಕೀಯ ಭಾಷೆ ಮತ್ತು ಸಂಸದೀಯ ಭಾಷೆ ಗೊತ್ತಿಲ್ಲ. ಹೆಗಡೆ ಒಬ್ಬ ಮನುವಾದಿ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.
ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸಂವಿಧಾನ ಬದಲಾಯಿಸುತ್ತೇವೆ ಎಂದಿದ್ದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಹೆಗಡೆಗೆ ದೇಶದ ಸಾಮಾಜಿಕ ವ್ಯವಸ್ಥೆ ಬಗ್ಗೆ ಅರಿವಿಲ್ಲ ಮತ್ತು ದೇಶದ ಸಂವಿಧಾನದ ಬಗ್ಗೆ ಗೌರವ ಇಲ್ಲ. ಅವರು ಜಾತ್ಯತೀತ ವಿರೋಧಿ ಮಾತನಾಡುತ್ತಾರೆ. ಸರ್ವಧರ್ಮೀಯರು ಇರುವ ಈ ದೇಶವನ್ನು ಎಂದಿಗೂ ಹಿಂದೂ ರಾಷ್ಟ್ರ ಮಾಡಲು ಸಾಧ್ಯವಿಲ್ಲ ಎಂದರು.
ಹೆಗಡೆಯವರು ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳುತ್ತಾರೆ. ಸಂವಿಧಾನ ರಚನೆಯಾಗಿ ಎಷ್ಟು ವರ್ಷ ಆಯ್ತು, ಭಾರತ ದೇಶದ 125 ಕೋಟಿ ಜನರು ಭಾರತೀಯರು. ಎಲ್ಲಾ ಧರ್ಮಗಳು ಸಮಾನವಾಗಿ ಇರಬೇಕು ಎಂಬುದೇ ಪ್ರಜಾಪ್ರಭುತ್ವದ ಆಶಯ. ಸಂವಿಧಾನದ ಮೂಲ ಪರಿಕಲ್ಪನೆಯೇ ಜಾತ್ಯತೀತ ರಾಷ್ಟ್ರದ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಒಂದು ಧರ್ಮಕ್ಕೆ ದೇಶವನ್ನು ಸೀಮಿತಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.