ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ
ಬೆಂಗಳೂರು: ಸಂವಿಧಾನ ಬದಲಿಸುತ್ತೇವೆಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ವಿವಿಧ ರಾಜಕೀಯ ಪಕ್ಷಗಳು ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಹೆಗ್ಡೆಯವರ ಹೇಳಿಕೆಗೆ ಕಾಂಗ್ರೆಸ್ ನಾಯಕರು ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದರೆ, ದೆಹಲಿ ಹಾಗೂ ರಾಜ್ಯದಲ್ಲಿರುವ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಅನಂತ್ ಕುಮಾರ್ ಹೆಗ್ಡೆಯವರ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅನಂತ್ ಕುಮಾರ್ ಹೆಗ್ಡೆಗೆ ಸಂಸ್ಕೃತಿ ಇಲ್ಲ. ಅವರಿಗೆ ರಾಜಕೀಯ ಹಾಗೂ ಸಂವಿಧಾನದ ಭಾಷೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಹೆಗಡೆ ಒಬ್ಬ ಮನುವಾದಿ, ಸಂವಿಧಾನ ಬದಲಾವಣೆ ಮಾಡುತ್ತೇವೆಂದು ಹೇಳುತ್ತಾರೆ. ನಮ್ಮ ಸಂವಿಧಾನವೇ ಅವರಿಗೆ ಗೊತ್ತಿಲ್ಲ. ಅದರ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲ. ಜಾತ್ಯಾತೀತ ರಾಷ್ಟ್ರ ಮಾಡೋದು ಸಂವಿಧಾನದ ಉದ್ದೇಶ. ಇಡೀ ದೇಶವನ್ನು ಕೇವಲ ಒಂದು ಧರ್ಮಕ್ಕೆ ಸೀಮಿತ ಮಾಡಲಾಗದು ಎಂದು ಟೀಕಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರು ಮಾತನಾಡಿ, ಭಾರತದ ಸಂವಿಧಾನ ಬದಲಿಸುವ ಹೇಳಿಕೆ ಮೂಲಕ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆಯವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ. ಅವರ ಹೇಳಿಕೆಯ ಉದ್ದೇಶವನ್ನು ಸ್ಪಷ್ಟಪಡಿಸಬೇಕು. ಸಂವಿಧಾನಕ್ಕೆ ಕೈ ಹಾಕಲು ಮುಂದಾದರೆ ದೇಶದಲ್ಲಿ ದೊಡ್ಡ ಆಂದೋಲನ ಶುರುವಾಗಲಿದೆ. ಜಾತ್ಯಾತೀತತೆ ಹಾಗೂ ವಿಚಾರವಾದಿಗಳ ಬಗ್ಗೆಯೂ ಬಹಳ ಕೆಟ್ಟ ಅರ್ಥ ಬರುವ ರೀತಿಯಲ್ಲಿ ಅವರು ಮಾತನಾಡಿದ್ದಾರೆ. ಹೇಳಿಕೆ ಕುರಿತು ಹೆಗ್ಡೆಯವರು ಕೂಡಲೇ ಕ್ಷಮೆಯಾಚಿಸಬೇಕೆಂದು ಹೇಳಿದ್ದಾರೆ.
ಬಿಜೆಪಿ ಕೋರ್ ಸಮಿತಿ ಸಭೆಯಲ್ಲಿ ಹೆಗ್ಡೆ ಹೇಳಿಕೆ ಕುರಿತು ಚರ್ಚೆ ಸಾಧ್ಯತೆ
ಕೇಂದ್ರ ಸಚಿವ ಪ್ರಕಾಶ್ ಜವಡೇಕರ್ ನೇತೃತ್ವದಲ್ಲಿ ಬಿಜೆಪಿ ಕೋರ್ ಸಮಿತಿ ಸಭೆ ಇಂದು ನಡೆಯಲಿದ್ದು, ಹೆಗ್ಡೆಯವರ ಹೇಳಿಕೆ ಕುರಿತಂತೆ ಬಿಜೆಪಿ ಪಕ್ಷದ ನಾಯಕರು ಈ ವರೆಗೂ ಯಾವುದೇ ನಿಲುವನ್ನು ತೆಗೆದುಕೊಂಡಿಲ್ಲ. ಈ ಹಿನ್ನಲೆಯಲ್ಲಿ ಸಭೆಯಲ್ಲಿ ಬಿಜೆಪಿ ನಾಯಕರು ಅನಂತ್ ಕುಮಾರ್ ಹೆಗ್ಡೆಯವರು ಹೇಳಿಕೆ ಕುರಿತಂತೆ ಚರ್ಚೆ ನಡೆಸಲಿದ್ದಾರೆಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics