ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ
ಬೆಂಗಳೂರು: ತಮ್ಮ ರಾಜಕೀಯ ವಿರೋಧಿಗಳಿಗಿಂತಲೂ ಮುಂಚಿತವಾಗಿಯೇ ೨೦೧೮ರ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳನ್ನು ಪ್ರಾರಂಭಿಸಿರುವ ಜನತಾದಳ (ಜಾತ್ಯತೀತ) ಪಕ್ಷ, ಚುನಾವಣೆಗೆ ತಂತ್ರ ರೂಪಿಸಲು ಬೆಂಗಳೂರಿನಲ್ಲಿ ಫೆಬ್ರವರಿ ೧೦ಕ್ಕೆ ಸಮಾವೇಶ ಆಯೋಜಿಸಿದ್ದು, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸದಸ್ಯರನ್ನು ಆಹ್ವಾನಿಸಿದೆ.
"ಅರಮನೆ ಮೈದಾನದಲ್ಲಿ ಆಯೋಜಿಸಲಾಗಿರುವ ಈ ಸಮಾವೇಶದಲ್ಲಿ ೨೦೧೮ರ ವಿಧಾನಸಭಾ ಚುನಾವಣೆಗೆ ಭವಿಷ್ಯದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಕ್ಕೆ ವೇದಿಕೆಯಾಗಲಿದೆ. ಮತ್ತು ಅಭ್ಯರ್ಥಿಗಳ ಪಟ್ಟಿಯನ್ನು ಹೆಚ್ಚು ವಿಳಂಬ ಮಾಡದೆ ಘೋಷಿಸಲು ಸಹಕರಿಸುತ್ತದೆ. ಪಕ್ಷದ ಅಭ್ಯರ್ಥಿಗಳ ಪಟ್ಟಿಯಲ್ಲಿ ಎಲ್ಲ ಜಾತಿಗಳ ಮತ್ತು ಸಮುದಾಯಗಳ ಪ್ರತಿನಿಧಿತ್ವ ಇರುವಂತೆ ಎಚ್ಚರಿಕೆ ತೆಗೆದುಕೊಳ್ಳಲಾಗುವುದು" ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಭಾನುವಾರ ಹೇಳಿದ್ದಾರೆ.
"ಪಕ್ಷದ ವಿವಿಧ ಘಟಕಗಳ ಮುಂದಾಳತ್ವವನ್ನು ಕೂಡ ಪಕ್ಷ ಮರುಆಯೋಜಿಸಲಿದೆ. ಚುನಾವಣೆಗೂ ಮುಂಚಿತವಾಗಿ ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷಕ್ಕೆ ಅಗತ್ಯವಾದ ಪುಷ್ಟಿ ನೀಡಲು ಪಕ್ಷದ ಮುಖಂಡರ ಎರಡು ತಂಡಗಳನ್ನು ರಚಿಸಲಾಗಿದೆ. ಸ್ವಂತವಾಗಿ ಚುನಾವಣೆಗಳನ್ನು ಎದುರಿಸಿ ಸ್ಪಷ್ಟ ಬಹುಮತ ಪಡೆಯುವತ್ತ ನಮ್ಮ ಚಿತ್ತ" ಎಂದು ದೇವೇಗೌಡ ಹೇಳಿದ್ದಾರೆ.
ನಂತರದ ದಿನಗಳಲ್ಲಿ ತಾವೇ ರಸ್ತೆಗಿಳಿದು ಪ್ರಚಾರ ಮಾಡುವುದಾಗಿ ಕೂಡ ಗೌಡ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಮೇಲೆ ಹರಿಹಾಯ್ದಿರುವ ಅವರು ಉದ್ದಿಮೆಗಳಿಗೋಸ್ಕರ ರೈತರ ಜೀವವನ್ನು ಸರ್ಕಾರ ಹಿಂಡುತ್ತಿದೆ ಎಂದಿದ್ದಾರೆ. ಎಷ್ಟೋ ರೈತರಿಗೆ ಪರಿಹಾರ ನೀಡಿಲ್ಲ ಮತ್ತು ಹಲವು ಪ್ರಕರಣಗಳಲ್ಲಿ ಕಡಿಮೆ ಪರಿಹಾರ ನೀಡಲಾಗಿದೆ ಎಂದು ಕೂಡ ಅವರು ದೂರಿದ್ದು ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಲಿದ್ದಾರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics