ರಾಜಕೀಯ

ವಿಧಾನ ಸಭೆ ಚುನಾವಣೆಯಲ್ಲಿ ಎಲ್ಲಾ 224 ಕ್ಷೇತ್ರಗಳಲ್ಲೂ ಜೆಡಿಎಸ್ ಸ್ಪರ್ಧೆ: ದೇವೇಗೌಡ

Shilpa D

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 224 ವಿಧಾನ ಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಹೇಳಿದ್ದಾರೆ.

ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪೂರ್ಣಾವಧಿ ಅವಕಾಶ ನೀಡಿ, ಎರಡೂ ಪಕ್ಷಗಳು ರಾಜ್ಯ ದ್ರೋಹಿಗಳು ಎಂಬುದನ್ನು ದೃಢಪಡಿಸಿಕೊಂಡಿರುವ ರಾಜ್ಯದ ಜನತೆ ಜೆಡಿಎಸ್‌ ಅನಿವಾರ್ಯತೆಯನ್ನು ಮನಗಂಡಿದ್ದಾರೆ. ಆದರೆ, ಈ ಜನಾಭಿಪ್ರಾಯವನ್ನು ಮತವಾಗಿ ಪರಿವರ್ತಿಸುವ ಸವಾಲು ಪಕ್ಷದ ಮೇಲಿದೆ ಎಂದು ಹೇಳಿದ್ದಾರೆ.

ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಕೋಟ್ಯಂತರ ರೂ. ಪೋಲು ಮಾಡಿದರೂ ಜೆಡಿಎಸ್‌ ಅಭ್ಯರ್ಥಿಗೆ ಗೆಲುವು ಸಿಕ್ಕಿತು. ಪ್ರಜ್ಞಾವಂತ ಶಿಕ್ಷಕ ಸಮುದಾಯ ಜೆಡಿಎಸ್‌ ಬೆಂಬಲಕ್ಕೆ ನಿಂತಿತು. ಆದರೂ, ಮುಂದಿನ ವಿಧಾನಸಭೆ ಚುನಾವಣೆಗೆ ಸಂಪನ್ಮೂಲದ ಅಗತ್ಯವಿದೆ ಎಂದು ಹೇಳಿದರು.

ಆಯಾಯಾ ಜಿಲ್ಲೆಗಳ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರೂ ಸಲ್ಲಿಸಿದ ವರದಿ ಆಧಾರದ ಮೇಲೆ ವಿಧಾನಸಭೆ ಚುನಾವಣೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ, ಒಂದೇ ಕ್ಷೇತ್ರದಲ್ಲಿ ಒಬ್ಬರಿಗಿಂತ ಹೆಚ್ಚು ಅರ್ಹ ಅಭ್ಯರ್ಥಿಗಳಿದ್ದಾರೆ, ಪಕ್ಷದ ಕೋರ್ ಕಮಿಟಿ ಅಭ್ಯರ್ಥಿಯ ಹೆಸರನ್ನು ಫೈನಲ್ ಮಾಡಲಿದೆ ಎಂದು ದೇವೇಗೌಡ ತಿಳಿಸಿದ್ದಾರೆ.

SCROLL FOR NEXT