ತುಮಕೂರು: ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ನಿರ್ಮಾಣಗೊಂಡಿರುವ ಜೆಡಿಎಸ್ ನೂತನ ಕಚೇರಿ ಮಾರ್ಚ್ 15ರಂದು ಉದ್ಘಾಟನೆಯಾಗುತ್ತಿದ್ದು, ಅದಕ್ಕೆ ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ್ ಅವರ ಹೆಸರಿಡಲಾಗುವುದು ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಗುರುವಾರ ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಪ್ರಧಾನಿ, ಅರಮನೆ ಮೈದಾನದಲ್ಲಿ ಮಾರ್ಚ್ 15ರಂದು ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಜೆಪಿ ಕಾಲದ ಎಲ್ಲರಿಗೂ ಆಹ್ವಾನವಿದೆ ಎಂದು ತಿಳಿಸಿದರು. ಅಲ್ಲದೆ ಜನತಾ ಪರಿವಾರ ಒಟ್ಟುಗೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಮಾಡುತ್ತಿಲ್ಲ ಎಂದು ಸಹ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ತಮ್ಮ ಪಕ್ಷದ ಅತೃಪ್ತ ಶಾಸಕರ ಬಗ್ಗೆ ಪ್ರತಿಕ್ರಿಯಿಸಿದ ದೇವೇಗೌಡರು, ಜಮೀರ್ ಅಹಮದ್ ರಂತೆ ಲಕ್ಷಾಂತರ ಕಾರ್ಯಕರ್ತರಿದ್ದಾರೆ ಅವರಿಂದಲೇ ಪಕ್ಷ ಸಂಘಟನೆಯಾಗುತ್ತೆ ಅನ್ನೋದು ಸುಳ್ಳು ಎಂದು ಮಾರ್ಮಿಕವಾಗಿ ನುಡಿದರು.
ಇನ್ನು ಮುಂದಿನ ವಿಧಾಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದ ಮಾಜಿ ಪ್ರಧಾನಿ, ನಮ್ಮ ಕುಟುಂಬದಿಂದ ಕುಮಾರಸ್ವಾಮಿ ಮತ್ತು ರೇವಣ್ಣ ಮಾತ್ರ ಸ್ಪರ್ಧಿಸುತ್ತಾರೆ. ಇನ್ನುಳಿದವರ ಬಗ್ಗೆ ಈಗಲೇ ಏನೂ ಹೇಳುವುದಿಲ್ಲ. ಅಭ್ಯರ್ಥಿ ಪಟ್ಟಿ ವಿಚಾರವಾಗಿ ನಾಲ್ಕೈದು ಜಿಲ್ಲೆಗಳಲ್ಲಿ 5-6 ತಂಡ ಕುಳಿತು ಪರಿಶೀಲನೆ ನಡೆಸುತ್ತಿದ್ದಾರೆ. ಫೆಬ್ರವರಿ 24 ಅಥವಾ 25ರಂದು ಮೊದಲ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದರು.