ರಾಜಕೀಯ

ಡೈರಿ ಪ್ರಕರಣದಲ್ಲಿ ಪ್ರಧಾನ ಮಂತ್ರಿ ಕಾರ್ಯಾಲಯದ ಪಾತ್ರವಿದೆ: ದಿಗ್ವಿಜಯ್ ಸಿಂಗ್

Shilpa D

ಬೆಂಗಳೂರು:  ಬಿಜೆಪಿ ಬಿಡುಗಡೆ ಮಾಡಿರುವ ಡೈರಿ ಸುಳ್ಳಿನ ಕಂತೆಯಾಗಿದ್ದು, ಇದರಲ್ಲಿ ಪ್ರಧಾನ ಮಂತ್ರಿ ಕಾರ್ಯಾಲಯದ ಪ್ರಮುಖ ಪಾತ್ರವಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ  ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮನ್ವಯ ಸಮಿತಿ ಸಭೆಯ ನಂತರ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರದ ಘನತೆಗೆ ಧಕ್ಕೆ ತರಲು ಬಿಜೆಪಿ ಯತ್ನಿಸುತ್ತಿದೆ ಎಂದು ದೂರಿದ್ದಾರೆ.

ಎಂಎಲ್ ಸಿ ಗೋವಿಂದರಾಜು ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿ 11 ತಿಂಗಳಾಗಿದೆ.ಇಲಾಖೆ ಈ ಸಂಬಂಧದ ಪ್ರಕರಣವನ್ನು ಕ್ಲೋಸ್ ಮಾಡಲು ಮುಂದಾಗಿತ್ತು. 11 ತಿಂಗಳ ನಂತರ ಈಗ ಪ್ರಧಾನ ಮಂತ್ರಿ ಕಾರ್ಯಾಲಯದ ಸೂಚನೆ ಮೇರೆಗೆ ಬಿಜೆಪಿ ಪ್ರಕರಣದ ಬಗ್ಗೆ ಮಾತನಾಡುತ್ತಿದೆ  ಇದು ಕಾಂಗ್ರೆಸ್ ಸರ್ಕಾರದ ಮೇಲೆ ಕೆಸರೆರಚಲು ಬಿಜೆಪಿ ಮಾಡುತ್ತಿರುವ ಪ್ರಯತ್ನ ಎಂದು ಹೇಳಿದ್ದಾರೆ.

ಡೈರಿ ಕೇಸಿನ ಬಗ್ಗೆ ಅವರ ಬಳಿ  ಸಾಕ್ಷ್ಯವಿದ್ದರೇ ಕ್ರಮ ಕೈಗೊಳ್ಳುವಂತೆ ಮೋದಿ ಸರ್ಕಾರಕ್ಕೆ ದಿಗ್ವಿಜಯ್ ಸಿಂಗ್ ಆಗ್ರಹಿಸಿದ್ದಾರೆ. ಕೇಂದ್ರದ ಮೋದಿ ಸಂಪುಟದಲ್ಲಿರುವ ಕೆಲ ಬಿಜೆಪಿ ಸಚಿವರು ನಕಲಿ ಡೈರಿಗಳ ಹಿಂದೆ ಬಿದ್ದಿದ್ದು, ರಾಜ್ಯ ಸರ್ಕಾರದ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ದೂರಿದ್ದಾರೆ.

ನಾನು ಡೈರಿಯಲ್ಲಿ ಯಾವುದೇ ವಿಷಯ ಬರೆದಿಲ್ಲ ಎಂದು ಗೋವಿಂದರಾಜು ಹೇಳಿದ್ದಾರೆ. ರಾಜ್ಯಕ್ಕೆ ಬರ ಪರಿಹಾರ ಹಣ ನೀಡುವ ಬದಲು ಡೈರಿ ರಾಜಕೀಯ ಮಾಡುತ್ತಿದ್ದಾರೆ ಎಂದು ಸಿಂಗ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

SCROLL FOR NEXT