ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮತ್ತು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ನಡುವೆ ಜಟಾಪಟಿಗೆ ಕಾರಣವಾಗಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನ ಪ್ರಧಾನ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಮಾಜಿ ಮೇಯರ್ ಡಿ.ವೆಂಕಟೇಶ್ ಮೂರ್ತಿ ಅವರನ್ನು ಮಂಗಳವಾರ ಬಿಜೆಪಿಯಿಂದ ಅಮಾನತುಗೊಳಿಸಲಾಗಿದೆ.
ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ವೆಂಕಟೇಶ್ ಮೂರ್ತಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಿ ಬೆಂಗಳೂರು ಬಿಜೆಪಿ ಘಟಕದ ಅಧ್ಯಕ್ಷ ಸದಾಶಿವ ಅವರು ಆದೇಶ ಹೊರಡಿಸಿದ್ದಾರೆ.
ವೆಂಕಟೇಶ್ ಮೂರ್ತಿ ಅವರನ್ನು ಅಮಾನತುಗೊಳಿಸುವ ಮೂಲಕ ಈಶ್ವರಪ್ಪ ಬಣಕ್ಕೆ ಬಿಎಸ್ ವೈ ಅವರು ಬಿಸಿ ಮುಟ್ಟಿಸಿದ್ದಾರೆ.
ಇಂದು ಕಲಬುರಗಿಯಲ್ಲಿ ಮಾತನಾಡಿದ್ದ ಈಶ್ವರಪ್ಪ ಅವರು, ಬಿಎಸ್ ವೈ ಅವರನ್ನು ಸಿಎಂ ಮಾಡುವ ಉದ್ದೇಶ ರಾಯಣ್ಣ ಬ್ರಿಗೇಡ್ ಗೆ ಇಲ್ಲ. ಅವರನ್ನು ಸಿಎಂ ಆಗಿ ರಾಜ್ಯದ ಜನರೇ ಆಯ್ಕೆ ಮಾಡುತ್ತಾರೆಂದು ಹೇಳಿದ್ದರು.