ಮೈಸೂರು: ಕಾಂಗ್ರೆಸ್ ಗೆ ಅಧಿಕೃತವಾಗಿ ರಾಜೀನಾಮೆ ನೀಡಿದ ನಂತರ ಎಸ್ಎಂ ಕೃಷ್ಣ ತಮ್ಮ ರಾಜಕೀಯ ಕರ್ಮಭೂಮಿಗೆ ಭೇಟಿ ನೀಡಿದ್ದು, ಬೆಂಬಲಿಗರೂ ಸಹ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಮದ್ದೂರಿನಲ್ಲಿ ಎಸ್ಎಂ ಕೃಷ್ಣ ಅವರಿಗೆ ಅದ್ಧೂರಿ ಸ್ವಾಗತ ದೊರೆತಿದ್ದು, ಬೆಂಬಲಿಗರು ತಮ್ಮ ನಾಯಕನನ್ನು ಅನುಸರಿಸಲು ನಿರ್ಧರಿಸಿ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದಾರೆ. ಎಸ್ಎಂ ಕೃಷ್ಣ ರಾಜೀನಾಮೆ ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲೂ ಸಹ ಪರಿಣಾಮ ಬೀರಿದ್ದು ವಿಧಾನ ಪರಿಷತ್ ನ ಮಾಜಿ ಸದಸ್ಯ, ಎಸ್ಎಂ ಕೃಷ್ಣ ಬೆಂಬಲಿಗ ಡಿ ಮಾದೇಗೌಡ, ಕಾಂಗ್ರೆಸ್ ಮುಖಂಡ ವಿಕ್ರಾಂತ್ ದೇವೇಗೌಡ ಸಹ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದಾರೆ. ಮೈಸೂರಿನಲ್ಲಿಯೂ ಸಹ ಎಸ್ಎಂಕೆ ಬೆಂಬಲಿಗರು ಅವರ ಹಾದಿಯನ್ನೇ ಅನುಸರಿಸಲು ಮುಂದಾಗಿರುವುದರಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಭಾರಿ ಪ್ರಮಾಣದಲ್ಲಿ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮೂಡಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಆಶಾ ಮಂದಿರ ಯೋಜನೆಯ ಪ್ರಾರಂಭಕ್ಕೆ ಪ್ರಮುಖ ಪಾತ್ರ ವಹಿಸಿದ್ದ ಎಸ್ಎಂ ಕೃಷ್ಣಾ ಅವರ ಬೆಂಬಲಿಗ ಮಾದೇ ಗೌಡ, ಕಾಂಗ್ರೆಸ್ ಗೆ ರಾಜೀನಾಮೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸಗಣಿಯೊಂದಿಗಿರುವುದಕ್ಕಿಂತ ಶ್ರೀಗಂಧದೊಂದಿಗೆ ಇರುವುದು ಉತ್ತಮ ಎಂದು ಹೇಳಿದ್ದಾರೆ.
ಮದ್ದೂರಿಗೆ ಭೇಟಿ ನೀಡಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಎಸ್ಎಂ ಕೃಷ್ಣ ತಮ್ಮ ಮುಂದಿನ ರಾಜಕೀಯ ನಡೆಯ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.