ಬಿಜೆಪಿ ನಾಯಕರು( ಸಂಗ್ರಹ ಚಿತ್ರ)
ಬೆಂಗಳೂರು: ದಲಿತರ ಮನೆಯಲ್ಲಿ ಭೋಜನದ ನಂತರ ಬಿಜೆಪಿ ಅಲ್ಪ ಸಂಖ್ಯಾತ ಸಮುದಾಯಗಳ ಜನರನ್ನು ಓಲೈಸಲು ಮುಂದಾಗಿದೆ.
ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ವಿಸ್ತಾರಕ್ ಕಾರ್ಯಕ್ರಮ ಯಶಸ್ವಿಯಾದ ನಂತರ ಕರ್ನಾಟಕದಲ್ಲೂ ಅದೇ ತಂತ್ರಗಾರಿಕೆ ಮುಂದುವರಿಸಲು ರಾಜ್ಯ ಬಿಜೆಪಿ ಸಿದ್ಧತೆ ನಡೆಸಿದೆ.
ಸೋಮವಾರ ದೀನ್ ದಯಾಳ್ ಉಪಾಧ್ಯಾಯ ಅವರ ಹುಟ್ಟುಹಬ್ಬದ ಅಂಗವಾಗಿ ವಿಸ್ತಾರಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದೆ.
ವಿಸ್ತಾರಕ್ ಕಾರ್ಯಕ್ರಮಕ್ಕೆ 2,500 ಕಾರ್ಯಕರ್ತಕರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾ ಅಧ್ಯಕ್ಷ ಅಬ್ದುಲ್ ಅಜೀಂ ಹೇಳಿದ್ದಾರೆ. ಅತಿ ಹೆಚ್ಚು ಅಲ್ಪಸಂಖ್ಯಾತ ಸಮುದಾಯವಿರುವ ಕ್ಷೇತ್ರಗಳಲ್ಲಿ ಮುಂದಿನ 15 ದಿನಗಳ ಕಾಲ ಶಿಬಿರ ನಡೆಸಿ ಮನೆ ಮನೆಗೆ ತೆರಳುವುದಾಗಿ ಹೇಳಿದ್ದಾರೆ.
ಪ್ರತಿದಿನ 25 ಮನೆಗಳಿಗೆ ಭೇಟಿ ನೀಡಿ ಅಲ್ಪ ಸಂಖ್ಯಾತ ಸಮುದಾಯದ ನಿವಾಸಗಳಲ್ಲಿ ಕುಟುಂಬಸ್ಥರ ಜೊತೆ ಚರ್ಚಿಸಲಾಗುವುದು. ವಿದ್ಯಾರ್ಥಿಗಳು, ವೈದ್ಯರು, ವಕೀಲರು, ಮತ್ತು ಕಾರ್ಮಿಕರ ಗುಂಪುಗಳನ್ನು ರಚಿಸಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳ ಬಗ್ಗೆ ತಿಳಿಸಲಾಗುವುದು, ಆ ಮೂಲಕ ಕಾಂಗ್ರೆಸ ಮತ್ತು ಇತರ ಪಕ್ಷಗಳು, ಬಿಜೆಪಿ ಮತ್ತು ಅಲ್ಪಸಂಖ್ಯಾತ ಸಮುದಾಯದ ನಡುವೆ ನಿರ್ಮಿಸಿರುವ ಗೋಡೆಯನ್ನು ನಾಶ ಮಾಡುವುದಾಗಿ ಅಜೀಂ ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಸುಮಾರು30 ಸಾವಿರ ಮುಸ್ಲಿಮರು ಬಿಜೆಪಿಗೆ ನೋಂದಾಯಿಸಿಕೊಂಡಿದ್ದಾರೆ. ಅಲ್ಪ ಸಂಖ್ಯಾತ ಸಮುದಾಯದಿಂದ ಭಾರೀ ಬೆಂಬಲ ವ್ಯಕ್ತವಾಗುತ್ತಿದ್ದು, ಮುಂದಿನ ಆರು ತಿಂಗಳೊಳಗೆ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ಕ್ಷೇತ್ರದಿಂದ ಸುಮಾರು 1ಸಾವಿರ ಮಂದಿಯನ್ನು ನೋಂದಣಿ ಮಾಡಿಸುವ ಟಾರ್ಗೆಟ್ ಹೊಂದಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯ ಬಿಜೆಪಿ ನಾಯಕರು ಆರು ತಂಡಗಳನ್ನು ರಚಿಸಿದ್ದಾರೆ, ತಂಡದ ಮುಖಂಡರು ಸೂಚಿಸುವ ನಿರ್ಧಿಷ್ಟ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ವೋಟ್ ಬ್ಯಾಂಕ್ ಸೆಳೆಯಲು ಸೂಕ್ತ ತಂತ್ರಗಾರಿಕೆ ರೂಪಿಸಲಿದ್ದಾರೆ.
ಮೈಸೂರಿನ ನರಸಿಂಹರಾಜ ಕ್ಷೇತ್ರಕ್ಕೆ ಅಬ್ದುಲ್ ಅಜೀಂ, ಕಲಬುರಗಿ ಉತ್ತರ- ಮುಕ್ತಾರ್ ಪಥಾನ್, ರಶ್ಮಿ ಡಿಸೋಜಾ-ಬೆಂಗಳೂರು ದಕ್ಷಿಣ, ರಹೀಂ ಉಚಿಲ್- ಧಾರವಾಡ ದಕ್ಷಿಣ, ಶಾಂತರಾಂ ಕೆನ್ನಡಿ- ದಾವಣಗೆರೆ ಉತ್ತರ, ಹಡಗಲಿಗೆ ಟಿಪ್ಪು ಸುಲ್ತಾನ್ ಅವರನ್ನು ತಂಡದ ನಾಯಕರನ್ನಾಗಿ ನೇಮಿಸಲಾಗಿದೆ.