ಬೆಂಗಳೂರು: ಬಂಟ್ವಾಳದ ಗಲಭೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರಣ. ಪಕ್ಷವನ್ನು ಬಲಿಷ್ಠಗೊಳಿಸಲು ಈ ಎರಡೂ ಪಕ್ಷಗಳು ಗಲಭೆಗೆ ಕುಮ್ಮಕ್ಕು ನೀಡುತ್ತಿವೆ. ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಅಮಾಯಕರನ್ನು ಹರಕೆಯ ಕುರಿ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಕಳೆದ ಎರಡು ತಿಂಗಳಿಂದ ಬಿ.ಸಿ ರೋಡ್ ಮತ್ತು ಕಲ್ಲಡ್ಕ ದ ಜನತೆ ಭಯದಿಂದ ಬದುಕುತ್ತಿದ್ದಾರೆ. ಹಿಂದೂ ಮತ್ತು ಮುಸ್ಲಿಂ ಇಬ್ಬರು ಭಯದಿಂದಲೇ ಬದುಕುತ್ತಿರುವ ವಾತಾವರಣ ನಿರ್ಮಾಣವಾಗಿದೆ. ಈ ಸಂಬಂಧ ಸರ್ಕಾರ ಗುಪ್ತಚರ ಇಲಾಖೆ ಸಹಾಯ ಪಡೆದಿತ್ತೆ? ಗುಪ್ತಚರ ಇಲಾಖೆ ಡಿಜಿ ನನ್ನನ್ನು ಜೈಲಿಗೆ ಕಳುಹಿಸುವಲ್ಲಿ ಬ್ಯುಸಿಯಾಗಿದ್ದರು. ಅಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿದ್ದರೇ. ಸಿಎಂ ಸಿದ್ದರಾಮಯ್ಯ ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕುಮಾರಸ್ವಾಮಿ ದೂರಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಶಾಂತಿ ಪುನರ್ ಸ್ಥಾಪಿಸಲು ದೇವೇಗೌಡರ ನೇತೃತ್ವದಲ್ಲಿ ಶೀಘ್ರವೇ ಶಾಂತಿ ಸಭೆ ನಡೆಸಲಾಗುವುದು ಎಂದು ಅವರು ಹೇಳಿದರು. ಈ ಸಭೆಗೆ ಕಾಂಗ್ರೆಸ್ ಮತ್ತು ಬಿಜೆಪಿಯ ಇಬ್ಬರು ನಾಯಕರನ್ನು ಆಹ್ವಾನಿಸಿದ್ದೇನೆ, ಜೊತೆಗೆ ಅವರ ಧಾರ್ಮಿಕ ಮುಖಂಡರನ್ನು ಕರೆದು ತರಲು ಹೇಳಿರುವುದಾಗಿ ತಿಳಿಸಿದ್ದಾರೆ. ಇನ್ನು ನಾಲ್ಕು ದಿನಗಳಲ್ಲಿ ದಿನಾಂಕ ನಿಗದಿ ಪಡಿಸುವುದಾಗಿ ಹೇಳಿದ್ದಾರೆ.
ಪ್ರಾಮಾಣಿಕ ಅಧಿಕಾರಿಗಳಿಗೆ ಕೆಲಸ ಮಾಡಲು ಬಿಡದಿರುವುದೇ ಬಂಟ್ವಾಳದಲ್ಲಿ ನಡೆದ ಘಟನೆಗೆ ಕಾರಣ. ಕೆಂಪಯ್ಯನವರಂಥ ಸಲಹೆಗಾರರನ್ನು ಇಟ್ಟುಕೊಂಡರೆ ಇಂಥ ಘಟನೆಗಳು ಆಗುತ್ತವೆ’ ಎಂದು ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದಾರೆ. ದಕ್ಷಿಣ ಕನ್ನಡ ಜನರು ಷಂಡರಾ ಎಂದು ಸಂಸದೆ ಶೋಭಾ ಕರಂದ್ಲಾಜೆ ಕೇಳುತ್ತಾರೆ. ತಾಯಿ ಹೃದಯ ಇದ್ದವರು ಈ ರೀತಿ ಮಾತನಾಡುತ್ತಾರಾ. ಈ ರೀತಿ ಪ್ರಚೋದನೆ ಮಾಡೋದನ್ನ ಮೊದಲು ಬಿಡಿ’ ಎಂದು ಸಲಹೆ ನೀಡಿದರು.
ಇನ್ನೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 21 ರ ಮಧ್ಯರಾತ್ರಿಯವರೆಗೂ ನಿಷೇಧಾಜ್ಞೆ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಕೆ.ಜಿ ಜಗದೀಶ್ ಹೇಳಿದ್ದಾರೆ.