ರಾಜಕೀಯ

ಬೆಳಗಾವಿ: ಜಾರಕಿಹೊಳಿ ಕುಟುಂಬದಲ್ಲಿನ ರಾಜಕೀಯ ಸಮಸ್ಯೆಗಳೇ ಕಾಂಗ್ರೆಸ್ ಗೆ ಮಾರಕ!

Shilpa D
ಬೆಳಗಾವಿ: ಬೆಳಗಾವಿಯಲ್ಲಿ ಜಾರಕಿಹೊಳಿ ಕುಟುಂಬ ರಾಜಕೀಯವಾಗಿ ಅತಿ ಹೆಚ್ಚು ಪ್ರಬಲವಾಗಿದೆ. ಈ ರಾಜಕೀಯವೇ ಕುಟುಂಬವನ್ನು ಒಡೆದ ಮನೆಯನ್ನಾಗಿಸಿದೆ.
ಜಾರಕಿಹೊಳಿ ಕುಟುಂಬದ ಐವರು ಸಹೋದರರು ರಾಜಕೀಯ ಆಕಾಂಕ್ಷಿಗಳಾಗಿದ್ದಾರೆ. ಮೂವರು ಸದ್ಯ ಶಾಸಕರಾಗಿದ್ದು ಮತ್ತಿಬ್ಬರು ಮುಂದಿನ ವಿಧಾನಸಭೆ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಸತೀಶ್ ಜಾರಕಿಹೊಳಿ ಮತ್ತು ರಮೇಶ್ ನಡುವಿನ ಮನಸ್ತಾಪ ಕಾಂಗ್ರೆಸ್ ಗೆ ದೊಡ್ಡ ತಲೆನೋವಾಗಿದೆ, ಇಬ್ಬರ ನಡುವಿನ ಭಿನ್ನಮತವನ್ನು ಶಮನ ಗೊಳಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಅಬಕಾರಿ ಸಚಿವರಾಗಿದ್ದ ಸತೀಶ್ ಜಾರಕಿಹೊಳಿ ಅವರಿಗೆ ಸಣ್ಣ ಮತ್ತು ಗೃಹ ಕೈಗಾರಿಕೆ ನೀಡಿದ್ದೇ ಇಬ್ಬರು ನಡುವಿನ ಘರ್ಷಣೆಗೆ ಪ್ರಮುಖ ಕಾರಣವಾಗಿದೆ.
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ನಿ ಹೆಬ್ಬಾಳ್ಕರ್ ಮತ್ತು  ಸಹೋದರ ರಮೇಶ್ ಜಾರಕಿಹೊಳಿಯಿಂದಾಗಿ ತನ್ನನ್ನು ಕಡೆಗಣಿಸಲಾಗುತ್ತಿದೆ ಎಂದು ಬೇಸತ್ತಿರುವ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ತೊರೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಸತೀಶ್ ಜಾರಕಿಹೊಳಿ ಪ್ರತಿನಿಧಿಸುತ್ತಿರುವ ಯಮನಕರಡಿ ಕ್ಷೇತ್ರದಿಂದ ತಮ್ಮ ಮತ್ತೊಬ್ಬ ಸಹೋದರ ಲಖನ್ ಜಾರಕಿಹೊಳಿ ಸ್ಪರ್ದಿಸುತ್ತಾರೆ ಎಂದು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿರುವುದು ಮತ್ತಷ್ಟು ಅಸಮಾಧಾನ ಹೆಚ್ಚಲು ಕಾರಣವಾಗಿದೆ.
ಪಕ್ಷದ ಕಾರ್ಯಕರ್ತರನ್ನು ರಮೇಶ್ ದಾರಿ ತಪ್ಪಿಸುತ್ತಿದ್ದಾರೆ ಎಂಬುದು ಸತೀಶ್ ಜಾರಕಿಹೊಳಿ ಭಾವನೆಯಾಗಿದೆ,  ಜಿಲ್ಲೆಯ ಯಾವುದೇ ಕ್ಷೇತ್ರದಿಂದಲೂ ಸ್ಪರ್ಧಿಸಿ ಜಯಗಳಿಸುವ ಸಾಮರ್ಥ್ಯ ಸತೀಶ್ ಗಿದೆ, ಹೀಗಾಗಿ ತಮ್ಮ ಮತ್ತೊಬ್ಬ ಸಹೋದರ ಲಖನ್ ಅವರಿಗೆ ಯಮನಕರಡಿ ಸುರಕ್ಷಿತ ಕ್ಷೇತ್ರ ಎಂದು ರಮೇಶ್ ಎಲ್ಲೆಡೆ ಹೇಳಿಕೊಂಡು ಬರುತ್ತಿದ್ದಾರೆ. ಹೀಗಾಗಿ ಸತೀಶ್ ಜೆಡಿಎಸ್ ನಲ್ಲಿರುವ ತಮ್ಮ ಮತ್ತೊಬ್ಬ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರ ಜೊತೆ ಕೈ ಜೋಡಿಸಲಿದ್ದಾರೆ, ಅಂದರೆ ಜೆಡಿಎಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
SCROLL FOR NEXT