ಬೆಂಗಳೂರು: ಬಳ್ಳಾರಿಗೆ ತೆರಳಿ ನೀವು ಲಾಡ್ ಸಹೋದರರ ಬಗ್ಗೆ ಅಲ್ಲಿನ ಕಾರ್ಯಕರ್ತರ ಬಳಿ ವಿಚಾರಿಸಿದರೇ, ಸಾರ್ವಜನಿಕವಾಗಿ ಯಾರೋಬ್ಬರು ಲಾಡ್ ಸಹೋದರರ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ. ರಾಜಕೀಯವಾಗಿ ಅನಿಲ್ ಲಾಡ್ ಮತ್ತು ಸಂತೋಷ್ ಲಾಡ್ ನಡುವೆ ಎಲ್ಲವೂ ಸರಿಯಿದೆ ಎಂದು ಹೇಳುತ್ತಾರೆ.
ಆದರೆ ಈ ಸಹೋದರರ ನಡುವಿನ ಘರ್ಷಣೆ ಅಂತ್ಯವಾಗಿಲ್ಲ ಎಂಬುದು ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯ. ಲಾಡ್ ಸಹೋದರರ ನಡುವೆ ಹಲವು ಭಿನ್ನಾಭಿಪ್ರಾಯಗಳಿದ್ದು, ಅವರಿಬ್ಬರ ನಡುವೆ ರಾಜಕೀಯ ಹೊಂದಾಣಿಕೆಯಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಸಹೋದರರ ನಡುವಿನ ಈ ಗುದ್ದಾಟದಿಂದ ಅಲ್ಲಿನ ಕಾರ್ಯಕರ್ತರು ಅಕ್ಷರಶಃ ಚಿಂತೆಗೊಳಗಾಗಿದ್ದಾರೆ. ಈ ನಾಯಕರು ತಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಶೀಘ್ರವಾಗಿ ಬಗೆ ಹರಿಸಿಕೊಳ್ಳದಿದ್ದರೇ, ಬಳ್ಳಾರಿಯನ್ನು ರೆಡ್ಡಿ ಸಹೋದರರ ತೆಕ್ಕೆಗೆ ನೀಡಬೇಕಾಗುತ್ತದೆ ಎಂಬುದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ಅಭಿಮತ.
ಸಂತೋಷ್ ಲಾಡ್ ಅವರದ್ದು ಅನಿಲ್ ಲಾಡ್ ಗಿಂತ ಪ್ರಬುದ್ಧ ಹಾಗೂ ತಾಳ್ಮೆಯ ವ್ಯಕ್ತಿತ್ವ. ವಿ.ಎಸ್ ಲಾಡ್ ಅಂಡ್ ಸನ್ಸ್ ಮೈನಿಂಗ್ ಕಂಪನಿ ಜವಾಬ್ದಾರಿಯನ್ನು ಇಬ್ಬರು ತೆಗೆದುಕೊಂಡ ನಂತರ ಅವರಲ್ಲಿ ಭಿನ್ನಾಭಿಪ್ರಾಯ ಮೂಡಿತು ಎಂದು ಲಾಡ್ ಸಹೋದರರ ಬಗ್ಗೆ ತಿಳಿದಿರುವ ಕೆಲ ಜನ ಹೇಳುತ್ತಾರೆ.
ಕಲಘಟಗಿ ಶಾಸಕ ಸಂತೋಷ್ ಲಾಡ್ ರಾಜಕೀಯವಾಗಿ ವ್ಯವಹಾರ ಚತುರ, ಬಳ್ಳಾರಿ ನಗರ ಶಾಸಕ ಅನಿಲ್ ಲಾಡ್ ಅವರಿಗೆ ಸಚಿವ ಸ್ಥಾನ ಕೈ ತಪ್ಪಿ ಹೋದಾಗ, ಸಂತೋಷ್ ಲಾಡ್ ಅವರನ್ನು ಸತಿವ ಸ್ಥಾನ ಹುಡುಕಿ ಬಂದಿತ್ತು, ಆದರೆ ಗಣಿ ಹಗರಣದಲ್ಲಿ ಸಂತೋಷ್ ಹೆಸರು ಥಳುಕು ಹಾಕಿಕೊಂಡ ಹಿನ್ನೆಲೆಯಲ್ಲಿ ಅವರು ಆರು ತಿಂಗಳುಗಳ ಕಾಲ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.
ಮತ್ತೆ 2016 ರಲ್ಲಿ ಸಂಪುಟ ಪುನಾರಚನೆಯಾದಾಗ ಮತ್ತೆ ಸಂತೋಷ್ ಲಾಡ್ ಅವರಿಗೆ ಸಚಿವ ಸ್ಥಾನ ನೀಡಲಾಯಿತು. ಮೊದಲ ಬಾರಿಗೆ ಸಚಿವ ಸಂಪುಟಕ್ಕೆ ಸಂತೋಷ್ ಲಾಡ್ ಸೇರ್ಪಡೆಗೊಂಡಾಗ, ಅದನ್ನು ಅನಿಲ್ ಲಾಡ್ ಪ್ರಶ್ನಿಸಿದ್ದರು. ತಾನು ಮತ್ತು ಸಂತೋಷ್ ಲಾಡ್ ಇಬ್ಬರು ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿದ್ದೇವೆ, ಹೀಗಿರುವಾಗ ಸಂತೋಷ್ ಗೆ ಹೇಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ ಎಂದು ಅಪಸ್ವರವೆತ್ತಿದ್ದರು.
2016 ರಲ್ಲಿ ಸಂಪುಟಕ್ಕೆ ಮತ್ತೆ ಸಂತೋಷ್ ಲಾಡ್ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿದ್ದ ಅನಿಲ್ ಲಾಡ್ ಅಂದಿನ ಎಐಸಿಸಿ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರನ್ನು ಭೇಟಿ ಮಾಡಿ ದೂರು ನೀಡಿದ್ದರು. ಬೇಲೇಕೇರಿ ಪ್ರಕರಣದಲ್ಲಿ ಅನಿಲ್ ಲಾಡ್ ಜೈಲುವಾಸ ಅನುಭವಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos