ರಾಜಕೀಯ

ಕರ್ನಾಟಕ ಯೂತ್ ಕಾಂಗ್ರೆಸ್ ನ 4 ಉಪಾಧ್ಯಕ್ಷರ ರಾಜಿನಾಮೆ

Shilpa D
ಬೆಂಗಳೂರು: ಇತ್ತೀಚೆಗೆ ನಡೆದ ಕರ್ನಾಟಕ ಯುವ ಪ್ರದೇಶ ಕಾಂಗ್ರೆಸ್ ಸಮಿತಿ ಚುನಾವಣೆಯಲ್ಲಿ ತಮ್ಮನ್ನು ಕಡಗಣಿಸಿ ತಾರತಮ್ಯ ಮಾಡಲಾಗಿದೆ ಎಂಬ ಹಿನ್ನೆಲೆಯಲ್ಲಿ ಯೂತ್ ಕಾಂಗ್ರೆಸ್ ನ ನಾಲ್ಕು ಉಪಾಧ್ಯಕ್ಷರುಗಳು ರಾಜಿನಾಮೆ ನೀಡಿದ್ದಾರೆ.
ಕೆಂಪರಾಜು, ಆರ್ ರಾಜೇಂದ್ರ, ಕೆ. ಶಿವಕುಮಾರ್ ಮತ್ತು ಸೌಮಿಯಾ ತಬ್ರೀಜ್ ಹಾಗೂ ಕಾರ್ಯದರ್ಶಿ ಬೋರೆಗಾಡ ಎಂಬುವರು ತಮ್ಮ ರಾಜಿನಾಮೆ ಪತ್ರಗಳನ್ನು ಇಂಡಿಯನ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ಬ್ರಾರ್ ಅವರಿಗೆ ನೀಡಿದ್ದಾರೆ.
ಇದರ ಜೊತೆಗೆ ದೆಹಲಿಯಿಂದ ಆಗಮಿಸಿದ ಮೂರು ಸದಸ್ಯರ ತಂಡಕ್ಕೆ ಹಲವು ದೂರುಗಳನ್ನು ನೀಡಲಾಗಿದೆ. ಯಾವುದೇ ಕ್ರಮ ಕೈಗೊಳ್ಳದೇ ಪ್ರಮಾಣ ವಚನ ಕಾರ್ಯಕ್ರಮ ನಡೆಸಲಾಗಿದೆ. ಇದೊಂದು ಕಾರ್ಯಕರ್ತರ ಕಣ್ಣೊರೆಸುವ ತಂತ್ರವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ನಾಮಕರಣವಾಗಿರುವ ಅಮೃತ್ ಗೌಡ ಚುನಾವಣೆಯ ನಿಯಮಗಳನ್ನು ಮುರಿದಿದ್ದಾರೆ, ನಾಲ್ಕನೇ ಸ್ಥಾನದಲ್ಲಿದ್ದ ಅವರನ್ನು ನಾಮಿನೇಟ್ ಮಾಡಲಾಗಿದೆ ಎಂದು ದೂರಿದ್ದಾರೆ. 
ನಿನ್ನೆ ನಡೆದ ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷರ ಪ್ರಮಾಣ ವಚನ ಸಮಾರಂಭದಿಂದಾಗಿ ಬೆಂಗಳೂರಿನ ಹಲವೆಡೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಹಲವೆಡೆ ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರು ಪರದಾಡಬೇಕಾಯಿತು. ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ, ಚಾಲುಕ್ಯ ಸರ್ಕಲ್, ಇನ್ ಫೆಂಟ್ರಿ ರಸ್ತೆ, ರೇಸ್ ಕೋರ್ಸ್ ರೋಡ್ ಸೇರಿದಂತೆ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು. 
SCROLL FOR NEXT