ವಲಸಿಗರಿಗೆ ಟಿಕೆಟ್ ಇಲ್ಲ: ರಾಹುಲ್ ಹೇಳಿಕೆಯಿಂದ ಜೆಡಿಎಸ್ ಬಂಡಾಯ ಶಾಸಕರಿಗೆ ನಿರಾಸೆ
ಕೊನೆ ಕ್ಷಣದಲ್ಲಿ ಬೇರೆ ಪಕ್ಷದಿಂದ ವಲಸೆ ಬರುವವರಿಗೆ ಮಣೆ ಹಾಕುವುದಿಲ್ಲ. ಹೆಲಿಕಾಪ್ಟರ್‌ಗಳಲ್ಲಿ ಹಾರಿ ಬಂದು, ಪ್ರಭಾವ ಬೀರುವವರಿಗಂತೂ...
ಬೆಂಗಳೂರು: ಪುರಾತನ ಕಾಂಗ್ರೆಸ್ ಪಕ್ಷವನ್ನು ದೇಶಾದ್ಯಂತ ಮತ್ತೆ ಪುನಶ್ಚೇತನಗೊಳಿಸಲು ನಿರ್ಧರಿಸಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಮುಂದಿನ ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸದ ಹಾಗೂ ಪಕ್ಷಕ್ಕಾಗಿ ದುಡಿಯದ ನಾಯಕರು, ಕಾರ್ಯಕರ್ತರಿಗೆ ಟಿಕೆಟ್ ನೀಡುವುದಿಲ್ಲ ಎಂದು ಘೋಷಿಸಿದ್ದಾರೆ.
ಕಾಂಗ್ರೆಸ್ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊನೆ ಕ್ಷಣದಲ್ಲಿ ಬೇರೆ ಪಕ್ಷದಿಂದ ವಲಸೆ ಬರುವವರಿಗೆ ಮಣೆ ಹಾಕುವುದಿಲ್ಲ. ಹೆಲಿಕಾಪ್ಟರ್‌ಗಳಲ್ಲಿ ಹಾರಿ ಬಂದು, ಪ್ರಭಾವ ಬೀರುವವರಿಗಂತೂ ಟಿಕೆಟ್ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಯಾರು, ಎಷ್ಟೇ ದೊಡ್ಡವರಿರಲಿ ಪಕ್ಷಕ್ಕಾಗಿ ಕೆಲಸ ಮಾಡದೆ ಟಿಕೆಟ್ ಕೇಳಿದರೆ ಕೊಡುವುದಿಲ್ಲ. ಪಕ್ಷಕ್ಕಾಗಿ ದುಡಿಯುತ್ತಿರುವ ಪ್ರಾಮಾಣಿಕ ಕಾರ್ಯಕರ್ತರು ಹಾಗೂ ನಾಯಕರ ಪಟ್ಟಿ ತಯಾರಿಸುವಂತೆ ಈಗಾಗಲೇ ವೇಣುಗೋಪಾಲ್ ಅವರಿಗೆ ಹೇಳಿದ್ದೇನೆ ಎಂದು ರಾಹುಲ್ ಹೇಳಿದರು.
ಚುನಾವಣೆಗೆ ಇನ್ನು ಏಳೆಂಟು ತಿಂಗಳು ಉಳಿದಿದೆ. ನಿಮ್ಮ ಕ್ಷೇತ್ರಗಳಿಗೆ ಹೋಗಿ ಕೆಲಸ ಮಾಡಿ. ಜನರ ಕಷ್ಟಸುಖ ವಿಚಾರಿಸಿ ಪರಿಹಾರ ಮಾಡಿ ಎಂದು ರಾಹುಲ್ ಪಕ್ಷದ ಶಾಸಕರಿಗೂ ಕಿವಿಮಾತು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದೆ. ಆದರೆ, ಅದಕ್ಕಾಗಿ ಪ್ರಚಾರ ಪಡೆದಿಲ್ಲ. ಅಪಾರ ಹಣ ಖರ್ಚು ಮಾಡಿ ಪ್ರಚಾರ ಪಡೆಯಿರಿ ಎಂದು ಹೇಳುವುದಿಲ್ಲ. ಎಲ್ಲ ಮಂತ್ರಿಗಳೂ ಸರ್ಕಾರ ಮಾಡಿರುವ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.
ವಲಸಿಗರಿಗೆ ಟಿಕೆಟ್ ನೀಡುವುದಿಲ್ಲ ಎಂಬ ರಾಹುಲ್ ಗಾಂಧಿ ಹೇಳಿಕೆ ಜೆಡಿಎಸ್ ಬಂಡಾಯ ಶಾಸಕರಲ್ಲಿ ನಿರಾಸೆ ಮೂಡಿಸಿದೆ. ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ದಿಸಲು ಬಯಸಿದ್ದ, ಜೆಡಿಎಸ್ ನ ಜಮೀರ್ ಅಹಮದ್ ಖಾನ್, ಚಲುವರಾಯ ಸ್ವಾಮಿ, ಇಕ್ಬಾಲ್ ಅನ್ಸಾರಿ, ರಮೇಶ್ ಬಂಡಿಸಿದ್ದೇಗೌಡ, ಭೀಮಾ ನಾಯಕ್, ಅಖಂಡ ಶ್ರೀನಿವಾಸ ಮೂರ್ತಿ ಗೆ ಭಾರೀ ನಿರಾಸೆಯಾಗಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.