ಬೆಂಗಳೂರು: ಎಂಟು ವಿಧಾನ ಪರಿಷತ್ ಸದಸ್ಯರು ನಕಲಿ ಪ್ರಯಾಣದ ಬಿಲ್ ಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಪ್ರತಿಪಕ್ಷದ ನಾಯಕ ಪದ್ಮನಾಭ್ ರೆಡ್ಡಿ ಅವರು ಬುಧವಾರ ಚುನಾವಣಾ ಆಯೋಗದ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರಾದ ಬಿ.ಆರ್. ತಿಮ್ಮಾಪುರ, ಅಲ್ಲಮ ವೀರಭದ್ರಪ್ಪ, ರಘು ಆಚಾರ್, ಎನ್.ಎಸ್.ಬೋಜರಾಜು, ಎಸ್ ರವಿ, ಎಂ.ಡಿ.ಲಕ್ಷ್ಮಿನಾರಾಯಣ್ ಹಾಗೂ ಜೆಡಿಎಸ್ ವಿಧಾನ ಪರಿಷತ್ ಸದಸ್ಯರಾದ ಸಿ.ಆರ್. ಮನೋಹರ್ ಮತ್ತು ಅಪ್ಪಾಜಿ ಗೌಡ ಅವರ ವಿರುದ್ಧ ಪದ್ಮನಾಭ್ ರೆಡ್ಡಿ ಅವರು ದೂರು ನೀಡಿದ್ದು, ನಕಲಿ ಬಿಲ್ ನೀಡಿದ ಈ 8 ಸದಸ್ಯರನ್ನು ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಎಲ್ಲಾ ವಿಧಾನ ಪರಿಷತ್ ಸದಸ್ಯರು ರಾಜ್ಯದ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ 2016ರ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ತಾವು ಬೆಂಗಳೂರಿನ ಮತದಾರರು ಎಂದು ಮತ ಚಲಾಯಿಸಿದ್ದು, ಇದು ಚುನಾವಣಾ ಮಾನದಂಡಗಳಿಗೆ ವಿರುದ್ಧವಾಗಿದೆ ಎಂದು ಬಿಜೆಪಿ ಕಾರ್ಪೋರೇಟರ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ತಾವು ಬೆಂಗಳೂರು ನಿವಾಸಿಗಳು ಎಂದು ಘೋಷಿಸಿದ ಮೇಲೂ ಅವರು ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ವಾಸಿಸುವುದಾಗಿ ಹೇಳಿ ಕರ್ನಾಟಕ ವಿಧಾನ ಪರಿಷತ್ ಸಚಿವಾಲಯದಿಂದ ಪ್ರಯಾಣ ಭತ್ತೆ ಪಡೆಯುವ ಮೂಲಕ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಪದ್ಮನಾಭ್ ರೆಡ್ಡಿ ಅವರು ವರದಿಗಾರರಿಗೆ ತಿಳಿಸಿದ್ದಾರೆ.