ರಾಜಕೀಯ

2018ರ ವಿಧಾನಸಭೆ ಚುನಾವಣೆ: ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮ ವಿಭಾಗಕ್ಕೆ ಪುನರುಜ್ಜೀವನ

Shilpa D
ಬೆಂಗಳೂರು: ಸಾಮಾಜಿಕ ಮಾಧ್ಯಮಗಳ ಬಹು ಉಪಯೋಗ ಅರಿತಿರುವ ಬಿಜೆಪಿ ಮತ್ತು ಜೆಡಿಎಸ್ ಗಳು ಈಗಾಗಲೇ ತಮ್ಮ ಪಕ್ಷದ ಸೋಷಿಯಲ್ ಮೀಡಿಯಾ ವಿಭಾಗಕ್ಕೆ ಭದ್ರ ಬುನಾದಿ ಹಾಕಿವೆ.
2018ರ ವಿಧಾನಸಭೆ ಚುನಾವಣೆ ಗಮನದಲ್ಲಿರಿಸಿಕೊಂಡಿರುವ ಕಾಂಗ್ರೆಸ್ ತನ್ನ ಪಕ್ಷದ ಸಾಮಾಜಿಕ ಮಾಧ್ಯಮ ವಿಭಾಗವನ್ನ ಪುನರುಜ್ಜೀವನಗೊಳಿಸಲು ನಿರ್ಧರಿಸಿದೆ. ತನ್ನ ಪ್ರತಿಸ್ಫರ್ಧಿಗಳಿಗೆ ತಿರುಗೇಟು ನೀಡಲು ಸಿದ್ಧತೆ ನಡೆಸುತ್ತಿದೆ. 
ಪ್ರತಿಯೊಬ್ಬ ಜನಸಾಮಾನ್ಯನನ್ನು ತಲುಪಲು ಕಾಂಗ್ರೆಸ್ ಯೋಜನೆ ರೂಪಿಸಿದೆ. 2013 ರ ವಿಧಾನಸಭೆ ಚುನಾವಣೆ ನಂತರ ಸ್ಥಗಿತಗೊಂಡಿದ್ದ ಪಕ್ಷದ ಸಾಮಾಜಿಕ ವಿಭಾಗದ ಘಟಕವನ್ನು ಪುನರುಜ್ಜೀವನಗೊಳಿಸಲು ಅಲಿ ಆಸ್ಕರ್ ನಲ್ಲಿ ಒಂದು ಕೊಠಡಿ ತೆರೆದಿದೆ.
ಸೋಷಿಯಲ್ ಮೀಡಿಯಾ ಪ್ರಚಾರಕ್ಕಾಗಿ, ಅಗತ್ಯವಾದ ಕಟ್ಟಡವೊಂದರ ಹುಡುಕಾಟದಲ್ಲಿದೆ. ಕ್ವೀನ್ಸ್ ರಸ್ತೆ, ಕನ್ನಿಂಗ್ ಹ್ಯಾಮ್ ರಸ್ತೆಗಳಲ್ಲಿ ಕಟ್ಟಡಕ್ಕಾಗಿ ಶೋಧ ನಡೆಯುತ್ತಿದೆ.ಪಕ್ಷದ  ಮುಖಂಡರಾದ ಬಿ.ಎಲ್ ಶಂಕರ್, ಬಿ.ಕೆ ಚಂದ್ರಶೇಖರ್, ಮತ್ತು ವಿ.ಆರ್ ಸುದರ್ಶನ್ ಈ ವಿಭಾಗದ ಮೇಲ್ವಿಚಾರಣೆ ನೋಡಿಕೊಳ್ಳಲಿದ್ದಾರೆ.
ಒಂದು ತಿಂಗಳಲ್ಲಿ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ವಿಭಾಗದ ಸಿದ್ಧಗೊಳ್ಳಲಿದ್ದು, ರಾಜ್ಯ ಸರ್ಕಾರದ ಸಾಧನೆಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಜನರಿಗೆ ತಲುಪಿಸಲು ಹಾಗೂ ವಿರೋಧ ಪಕ್ಷಗಳ ಪ್ರಚಾರಕ್ಕೆ ಕೌಂಟರ್ ಕೊಡಲು ತಯಾರಿ ನಡೆಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಹೇಳಿದ್ದಾರೆ.
20 ಮಂದಿ  ಯುವ ಟೆಕ್ಕಿಗಳು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಕೆಲಸ ನಿರ್ವಹಿಸಲಿದ್ದಾರೆ, ಇವರನ್ನು ಹೊರತು ಪಡಿಸಿ ಹಲವಾರು ಟೆಕ್ಕಿಗಳು ಕಾಂಗ್ರೆಸ್ ಪರ ಸೋಷಿಯಲ್ ಮೀಡಿಯಾದಲ್ಲಿ ಕೆಲಸ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಸಿಎಂ ಸಿದ್ದರಾಮಯ್ಯ ಜೂನ್ 26 ರಿಂದ ಬೆಳಗಾವಿ, ಹಾಸನ, ರಾಮನಗರ, ತುಮಕೂರು, ಬಳ್ಳಾರಿ, ಕಲಬುರಗಿ,  ಮಂಡ್ಯ ಮತ್ತು ಕೋಲಾರಗಲ್ಲಿ ಸಭೆ ನಡೆಸಿ ಜಿಲ್ಲಾ ಮುಖಂಡರಲ್ಲಿ ಉಂಟಾಗಿರುವ ಅಸಮಾಧಾನ ಬಗೆಹರಿಸುವುದಾಗಿ ಪರಮೇಶ್ವರ್ ಹೇಳಿದ್ದಾರೆ
SCROLL FOR NEXT