ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮೀರಾ ಕುಮಾರ್ ಗೆ ಸನ್ಮಾನ
ಬೆಂಗಳೂರು: ಯುಪಿಎ ರಾಷ್ಟ್ರಪತಿ ಅಭ್ಯರ್ಥಿ ಹಾಗೂ ಲೋಕಸಭಾ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರು ಶನಿವಾರ ಬೆಂಗಳೂರಿಗೆ ಆಗಮಿಸಿದ್ದು, ಅವರಿಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಬೆಂಬಲ ಸೂಚಿಸಿದ್ದಾರೆ.
ಇಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಐಪಿ ಲಾಂಚ್ ನಲ್ಲಿ ದೇವೇಗೌಡರನ್ನು ಭೇಟಿ ಮಾಡಿದ ಮೀರಾಕುಮಾರ್, ರಾಷ್ಟ್ರಪತಿ ಚುನಾವಣೆಯಲ್ಲಿ ತಮಗೆ ಬೆಂಬಲ ನೀಡುವಂತೆ ಕೋರಿದ್ದು, ಇದಕ್ಕೆ ಮಾಜಿ ಪ್ರಧಾನಿ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಸಚಿವ ಆಂಜನೇಯ, ಸಂಸದ ಕೆಎಚ್ ಮುನಿಯಪ್ಪ, ಕಾಂಗ್ರೆಸ್ ಮುಖಂಡ ಬಿಎಲ್ ಶಂಕರ್ ಹಾಜರಿದ್ದರು.
ಜುಲೈ 17ಕ್ಕೆ ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಜು. 20ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಬಿಹಾರ ರಾಜ್ಯಪಾಲ ರಾಮನಾಥ್ ಕೋವಿಂದ ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿದ್ದಾರೆ. ಮೀರಾಕುಮಾರ್ ಯುಪಿಎ ಮಿತ್ರಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.