ಬೆಂಗಳೂರು: ಮಾರ್ಚ್ 15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ ರಾಜ್ಯ ಬಜೆಟ್ ಉಪ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಬಜೆಟ್ ನಲ್ಲಿ ಜನಪ್ರಿಯ ಯೋಜನೆ ಘೋಷಿಸದಂತೆ ಸರ್ಕಾರಕ್ಕೆ ಸೂಚಿಸಬೇಕು ಎಂದು ರಾಜ್ಯ ಬಿಜೆಪಿ ನಿಯೋಗ ಶುಕ್ರವಾರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.
ಇಂದು ಶಾಸಕ ಸುರೇಶ್ ಕುಮಾರ್ ನೇತೃತ್ವದ ಬಿಜೆಪಿ ನಿಯೋಗ ರಾಜ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಬಳಿಕ ಮಾತನಾಡಿದ ಸುರೇಶ್ ಕುಮಾರ್ ಅವರು ನಾವು ಬಜೆಟ್ ಮುಂದೂಡುವಂತೆ ಒತ್ತಾಯಿಸುತ್ತಿಲ್ಲ. ಆದರೆ ಬಜೆಟ್ ನಲ್ಲಿ ಪರಿಣಾಮ ಬೀರುವ ಜನಪ್ರಿಯ ಘೋಷಣೆ ಬೇಡ ಎಂದು ಚುನಾವಣಾ ಆಯೋಗ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಒತ್ತಾಯಿಸಿದ್ದೇವೆ ಎಂದರು.
15 ರಂದು ರಾಜ್ಯ ಬಜೆಟ್ ಮಂಡನೆಯಾಗಲಿದೆ. ಆದರೆ ಈ ನಡುವೆ ನಂಜನಗೂಡು ಹಾಗೂ ಗುಂಡ್ಲುಪೇಟೆಗೆ ಉಪ ಚುನಾವಣೆ ಘೋಷಣೆಯಾಗಿದ್ದು, ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್ ಚುನಾವಣಾ ಪ್ರಣಾಳಿಕೆಯಾಗಿರಬಾರದು. ಯಾವುದೇ ಜನಪ್ರಿಯ ಯೋಜನೆ ಘೋಷಿಸುವುದು ಕೂಡ ಸರಿಯಲ್ಲ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
2017-18ನೇ ಸಾಲಿನ ರಾಜ್ಯ ಬಜೆಟ್ ಅನ್ನು ವಿತ್ತ ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 15ರಂದು ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಲಿದ್ದಾರೆ. ಮುಂದಿನ ತಿಂಗಳು ಉಪ ಚುನಾವಣೆ ಹಾಗೂ ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ರಾಜ್ಯ ಬಜೆಟ್ ಭರ್ಜರಿ ಕೊಡುಗೆ ಘೋಷಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಿಜೆಪಿ ನಾಯಕರಿಗೆ ಸಾಮಾನ್ಯ ಪರಿಜ್ಞಾನ ಇಲ್ಲ. ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಇದ್ದರೂ ಕೇಂದ್ರ ಬಜೆಟ್ ಮಂಡಿಸಲಿಲ್ಲವೇ? ಹಾಗ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics