ರಾಜಕೀಯ

ನಂಜನಗೂಡು ಉಪಚುನಾವಣೆ ನನ್ನ ಮತ್ತು ಸಿಎಂ ಸಿದ್ದರಾಮಯ್ಯ ಮಧ್ಯೆ ಸ್ಪರ್ಧೆ: ಶ್ರೀನಿವಾಸ ಪ್ರಸಾದ್

Srinivasamurthy VN

ಮೈಸೂರು: ನಂಜನಗೂಡು ಉಪ ಚುನಾವಣೆ ನನ್ನ ಮತ್ತು ಸಿಎಂ ಸಿದ್ದರಾಮಯ್ಯ ಅವರ ನಡುವಿನ ಸ್ಪರ್ಧೆಯಾಗಿದೆ ಎಂದು ಬಿಜೆಪಿ ಅಭ್ಯರ್ಥಿ ವಿ ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.

ಮೈಸೂರಿನಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರು, "ನಂಜನಗೂ ಉಪ ಚುನಾವಣೆ ಮೂಲಕ ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ನಾನು ಮುನ್ನುಡಿ ಬರೆಯುತ್ತೇನೆ. ಈ ಚುನಾವಣೆ  ನನ್ನ ಮತ್ತು ಸಿಎಂ ಸಿದ್ದರಾಮಯ್ಯ ಅವರ ನಡುವಿನ ನೇರ ಸ್ಪರ್ಧೆಯಾಗಿದ್ದು, ನಾನೇನಾದರೂ ಸೋತರೆ ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತೇನೆ. ಅಲ್ಲದೆ ರಾಜಕೀಯ ಮಾತನಾಡುವುದನ್ನೇ ನಿಲ್ಲಿಸುತ್ತೇನೆ ಎಂದು ಹೇಳಿದರು.

ಅದೇ ನಾನು ಗೆದ್ದರೆ ಸಿಎಂ ರಾಜಿನಾಮೆ ನೀಡುತ್ತಾರೆ? ಈ ಬಗ್ಗೆ ಅವರನ್ನು ಕೇಳಿದರೆ ಪಲಾಯನ ಮಾಡುತ್ತಾರೆ. ಈಗ ಚುನಾವಣೆ ದಿನಾಂಕ ಘೋಷಣೆಯಾದ ಮೇಲೆ ಕ್ಷೇತ್ರಕ್ಕೆ ದೌಡಾಯಿಸುತ್ತಿದ್ದು, ದುರ್ಯೋಧನ ಯುದ್ಧಕೆ ಹೆದರಿ  ಕೊಳದಲ್ಲಿ ಅವಿತು ಬಳಿಕ ಮೇಲೆ ಬಂದಂತೆ ಸಿದ್ದರಾಮಯ್ಯ ಈಗ ಮೇಲೆದ್ದು ಬರುತ್ತಿದ್ದಾರೆ ಎಂದು ಶ್ರೀನಿವಾಸ್ ಪ್ರಸಾದ್ ವ್ಯಂಗ್ಯವಾಡಿದರು. ಇದೇ ವೇಳೆ ಮಹದೇವಪ್ಪ ಅವರ ವಿರುದ್ಧ ಕಿಡಿಕಾರಿದ ಶ್ರೀನಿವಾಸ್ ಪ್ರಸಾದ್ ಅವರು,  ಲೋಕೋಪಯೋಗಿ ಸಚಿವ ಮಹದೇವಪ್ಪ ಅವರಿಗೆ ಜಿಲ್ಲಾ ಪಂಚಾಯತ್ ಚುನಾವಣೆಗೂ ನಿಲ್ಲುವ ಯೋಗ್ಯತೆ ಇಲ್ಲ. ಅವರು ಸ್ವಂತ ಶಕ್ತಿಯ ಮೇಲೆ ಗೆಲುವ ಸಾಧಿಸುವ ಸಾಮರ್ಥ್ಯ ಹೊಂದಿಲ್ಲ. ಅವರಲ್ಲಿ ನಾಯಕತ್ವ ಗುಣವೇ ಇಲ್ಲ  ಎಂದು ಕಿಡಿಕಾರಿದರು.

ಅಂತೆಯೇ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ ಅವರ ವಿರುದ್ಧವೂ ಕಿಡಿಕಾರಿದ ಶ್ರೀನಿವಾಸ್ ಪ್ರಸಾದ್ ಅವರು, ಪರಮೇಶ್ವರ ಅವರು ಕಿವುಡ ಮತ್ತು ಮೂಗರ ಶಾಲೆಯ ಶಿಕ್ಷಕರಿದ್ದ ಹಾಗೆ. ಅವರು ಮಾತ್ರವಲ್ಲ ಇಡೀ ಕಾಂಗ್ರೆಸ್ ಪಕ್ಷದ  ಸ್ಥಿತಿಯೇ ಈ ರೀತಿ ಇದೆ. ಆ ಪಕ್ಷದ ಹೈಕಮಾಂಡ್ ಗೆ ಸೂಟ್ ಕೇಸ್ ಗಿರಾಕಿಗಳೇ ಬೇಕು ಎಂದು ಪ್ರಸಾದ್ ವಾಗ್ದಾಳಿ ನಡೆಸಿದರು.

ಇದೇ ವೇಳೆ ಶ್ರೀನಿವಾಸ್ ಪ್ರಸಾದ್ ಅವರ ಆಳಿಯ ಹರ್ಷ ವರ್ಧನ್ ಅವರ ಬೆಂಬಲಿಗರೂ ಕೂಡ ಬಿಜೆಪಿ ಸೇರ್ಪಡೆಯಾದರು.

SCROLL FOR NEXT