ರಾಜಕೀಯ

ಮೋದಿ ಕೆಲಸಗಳಿಗೆ ಮೆಚ್ಚುಗೆಯಿದೆ,ಆದರೆ ಬಿಜೆಪಿ ಸೇರಲ್ಲ: ಎಂ.ವಿ ರಾಜಶೇಖರನ್

Shilpa D

ಬೆಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ ಎಂ.ವಿ ರಾಜಶೇಖರನ್ ಬಿಜೆಪಿ ಸೇರುತ್ತಾರೆ ಎಂಬ ವದಂತಿಗಳಿಗೆ ಸ್ವತಃ ಅವರೇ ತೆರೆ ಎಳೆದಿದ್ದಾರೆ.

'ನಾನು ಪ್ರಧಾನಿ ನರೇಂದ್ರ ಮೋದಿ ಅವರ ಒಳ್ಳೆಯ ಕೆಲಸಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತೇವೆ, ಅದರ್ಥ ನಾನು ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತೇನೆ ಎಂದಲ್ಲ, ನಾನು ಯಾವಾಗಲೂ ಕಾಂಗ್ರೆಸ್ ನಲ್ಲೇ ಇರುತ್ತೇನೆ' ಎಂದು ಎಂ.ವಿ ರಾಜಶೇಖರನ್ ಸ್ಪಷ್ಟ ಪಡಿಸಿದ್ದಾರೆ.

ಇತ್ತೀಚೆಗೆ ಎಂ,ವಿ ರಾಜಶೇಖರನ್ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು, ಕೇಂದ್ರ ಸರ್ಕಾರದ ಜನ ಕಲ್ಯಾಣ ಯೋಜನೆಗಳ ಬಗ್ಗೆ ಮೆಚ್ಟುಗೆ ವ್ಯಕ್ತ ಪಡಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜಶೇಖರನ್ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಹರಡಿತ್ತು.

ಇತ್ತೀಚೆಗೆ ಮಾಜಿ ಸಿಎಂ ಎಸ್.ಎಂ ಕೃಷ್ಣ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ರಾಜಶೇಖರನ್ ಕೂಡ ಕೃಷ್ಣ ಹಾದಿ ಹಿಡಿಯುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈ ಸುದ್ದಿಯನ್ನು ನಿರಾಕರಿಸಿರುವ ಅವರು, ಕಾಂಗ್ರೆಸ್ ಪಕ್ಷ ನನಗೆ ಎಲ್ಲವನ್ನೂ ನೀಡಿದೆ.ಈ ವಯಸ್ಸಿನಲ್ಲಿ ನಾನು ಕಾಂಗ್ರೆಸ್ ತೊರೆದು ಬಿಜೆಪಿ ಏಕೆ ಸೇರಲಿ, ನಾನು ಕಾಂಗ್ರೆಸ್ ನ ತತ್ವಾದರ್ಶಗಳಲ್ಲಿ ನಾನು ನಂಬಿಕೆಯಿಟ್ಟಿದ್ದೇನೆ ಎಂದು ಹೇಳಿದ್ದಾರೆ.

ನಾನು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದೆ, ಆ ಪತ್ರಕ್ಕೆ ಅವರು ಪ್ರತಿಕ್ರಿಯೆ ನೀಡಿ ಧನ್ಯವಾದ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

SCROLL FOR NEXT