ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ನೇಮಕಗೊಂಡಿರುವ ಕೆ.ಸಿ ವೇಣುಗೋಪಾಲ್ ಅವರ ಮುಂದೆ ಸವಾಲುಗಳ ಸರಮಾಲೆಯೆ ಇದೆ.
ರಾಜ್ಯ ಸರ್ಕಾರ ವಿಧಾನ ಪರಿಷತ್ ಗೆ ಮೋಹನ್ ಕೊಂಡಜ್ಜಿ, ಸಿ.ಎಂ ಲಿಂಗಪ್ಪ ಮತ್ತು ಪಿ.ಆರ್ ರಮೇಶ್ ಅವರ ಹೆಸರುಗಳನ್ನು ಶಿಫಾರಸು ಮಾಡಿದೆ. ಎಂಎಲ್ ಸಿ ಗಳ ನಾಮ ನಿರ್ದೇಶನದ ನಂತರ ವೇಣುಗೋಪಾಲ್ ಅವರ ಮುಂದಿರುವ ದೊಡ್ಡ ಟಾಸ್ಕ್ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ.
ಕೇರಳದ ಅಪ್ಜಲಪುರ ಕ್ಷೇತ್ರದ ಸಂಸದರಾಗಿರುವ ವೇಣುಗೋಪಾಲ್ ರಾಜ್ಯ ಕಾಂಗ್ರೆಸ್ ನಲ್ಲಿ ಪದೇ ಪದೇ ಮೂಡುತ್ತಿರುವ ಆಂತರಿಕ ಬಿಕ್ಕಟ್ಟನ್ನು ಹೇಗೆ ಬಗೆ ಹರಿಸುತ್ತಾರೆ ಎಂಬುದೇ ಎಲ್ಲರ ಪ್ರಶ್ನೆಯಾಗಿದೆ.
2018ರ ವಿಧಾನ ಸಭೆ ಚುನಾವಣೆ ಹೊತ್ತಿಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಸಿದ್ಧತೆ ನಡೆಯುತ್ತಿದೆ, ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಹುದ್ದೆಗೆ ಲಾಬಿ ಆರಂಭವಾಗಿದೆ,ಗೃಹ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ಕೆಪಿಸಿಸಿ ಅಧ್ಯಕ್ಷ ಹುದ್ದೆಯಲ್ಲಿಯೇ ಮುಂದುವರಿಯವ ಇಚ್ಚೆಯನ್ನು ಪರಮೇಶ್ವರ್ ವ್ಯಕ್ತ ಪಡಿಸಿದ್ದಾರೆ.
ಆದರೆ ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿರು ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತರಾದ ಎಸ್ ಆರ್ ಪಾಟೀಲ್ ಅಥವಾ ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಒಲವು ತೋರಿದ್ದಾರೆ.
ತಮ್ಮ ಮುಂದಿರುವ ಸವಾಲುಗಳ ಬಗ್ಗೆ ಚೆನ್ನಾಗಿ ಅರಿತಿರುವ ವೇಣು ಗೋಪಾಲ್, ಪಕ್ಷ ನನಗೆ ಒಂದು ಕೆಲಸ ನಿರ್ವಹಿಸಿದೆ, ಅದನ್ನು ಸರಿಯಾಗಿ ನಿರ್ವಹಿಸಿ ಉತ್ತಮ ಫಲಿತಾಂಶ ನೀಡುವ ವಿಶ್ವಾಸ ನನಗಿದೆ ಎಂದು ಅವರು ಹೇಳಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಗದ್ದುಗೇರುವಂತೆ ಮಾಡುವುದು ನನ್ನ ಜವಾಬ್ದಾರಿ ಎಂದು ಹೇಳಿದ್ದಾರೆ.
ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯ ಸರಿಪಡಿಸುವುದು ಬಹುದೊಡ್ಡ ಸವಾಲಾಗಿದೆ. ಈ ಹಿಂದೆ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ದಿಗ್ವಿಜಯ ಸಿಂಗ್, ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿದ್ದರು, ಹೀಗಾಗಿ ಆಂತರಿಕ ಸಮಸ್ಯೆಗಳ ಕಡಿವಾಮಕ್ಕೆ ಮುಂದಾಗಿರಲಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಇನ್ನೆರಡು ದಿನಗಳಲ್ಲಿ ವೇಣು ಗೋಪಾಲ್ ಬೆಂಗಳೂರಿಗೆ ಆಗಮಿಸಲಿದ್ದಾರೆ, ಈ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆಗಳು ನಡೆಯುತ್ತಿವೆ. ಬೆಂಗಳೂರಿಗೆ ಆಗಮಿಸಿದ ನಂತರ ಮುಂದಿನ ಕಾರ್ಯತಂತ್ರಗಳ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕರ ಜೊತೆ ಚರ್ಚಿಸಲಿದ್ದಾರೆ.