ಕೊಪ್ಪಳ: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಬಿಜೆಪಿ ವಿಧಾನಪರಿಷತ್ ಮುಖಂಡ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಮತ್ತು ನನ್ನ ನಡುವಿನ ಜಗಳ ಇದೀಗ ಮುಗಿದ ಅಧ್ಯಾಯ. ಮುಂದಿನ ಚುನಾವಣೆಯತ್ತ ನಾವು ಒಗ್ಗೂಡಿ ಕೆಲಸ ಮಾಡುತ್ತಿದ್ದೇವೆ. ಯಡಿಯೂರಪ್ಪ ನೇತೃತ್ವದಲ್ಲೇ ಮುಂದಿನ ಚುನಾವಣೆಯನ್ನು ಎದುರಿಸುತ್ತೇವೆ. ನಮ್ಮ ನಡುವಿನ ಸಮಸ್ಯೆ ನೂರಕ್ಕೆ ನೂರರಷ್ಟು ಬಗೆ ಹರಿದಿದೆ. ನಮ್ಮ ಜಗಳದಿಂದ ಕಾರ್ಯಕರ್ತರಿಗೆ ನೋವಾಗಿದೆ ಎಂದು ಹೇಳಿದರು.
ಅಂತೆಯೇ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಈಶ್ವರಪ್ಪ ಅವರು, ನಮ್ಮ ಜಗಳ ಮುಕ್ತಾಯವಾಗಿದೆ, ಅವರ ಜಗಳ ಶುರುವಾಗಿದೆಯ ವೇಣುಗೋಪಾಲ್ ಅವರು ರಾಜ್ಯಕ್ಕೆ ಬಂದು ಹೋದರೂ ಅವರಲ್ಲಿ ಜಗಳ ಮಾತ್ರ ಮುಗಿದಿಲ್ಲ ಎಂದು ವ್ಯಂಗ್ಯವಾಡಿದರು.