ರಾಜಕೀಯ

ಜಾತಿ ಸಮೀಕರಣಕ್ಕೆ ಮುಂದಾದ ಕಾಂಗ್ರೆಸ್: ಪರಿಷತ್ ಸಭಾಪತಿಯಾಗಿ ಎಸ್.ಆರ್. ಪಾಟೀಲ್

Shilpa D
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಜಿ ಪರಮೇಶ್ವರ್ ಅವರನ್ನು ಮುಂದುವರಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದ್ದು, ಅಸಮಾಧಾನಗೊಂಡಿರುವ ಡಿ.ಕೆ ಶಿವಕುಮಾರ್ ಮತ್ತು ಎಸ್, ಪಾಟೀಲ್ ಅವರಿಗೆ ಹೊಸ ಜವಾಬ್ದಾರಿ ಕೊಡಲು ಚಿಂತನೆ ನಡೆಸಲಾಗಿದೆ. ಜೊತೆಗೆ ಜಾತಿ ಸಮೀಕರಣದ ಮೇಲೆ ಸದ್ಯ ಖಾಲಿ ಇರುವ ಸಚಿವ ಸ್ಥಾನ ತುಂಬಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ.
ಒಕ್ಕಲಿಗ ಸಮುದಾಯದ ಪ್ರಬಲ ನಾಯಕರಾಗಿರುವ ಡಿ.ಕೆ ಶಿವಕುಮಾರ್ ಮತ್ತು ಲಿಂಗಾಯತ ಮುಖಂಡ ಎಸ್. ಆರ್ ಪಾಟೀಲ್  ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿದ್ದಾರೆ. ಹೀಗಾಗಿ ಅವರಿಬ್ಬರಿಗೂ ಸೂಕ್ತ ಸ್ಥಾನ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸಭಾಪತಿ ಡಿ.ಎಚ್ ಶಂಕರಮೂರ್ತಿ ಅವರನ್ನು ಹುದ್ದೆಯಿಂದ ತೆರವುಗೊಳಿಸಿ ಆ ಸ್ಥಾನಕ್ಕೆ ಎಸ್.ಆರ್ ಪಾಟೀಲ್ ಅವರನ್ನು ನೇಮಿಸಲು ನಿರ್ಧರಿಸಿದ್ದು, ಶಂಕರಮೂರ್ತಿ ವಿರುದ್ಧ ನಿಲುವಳಿ ಸೂಚನೆ ಮಂಡಿಸಲು ನೋಟಿಸ್ ನೀಡಲಾಗಿದೆ.
ಜೂನ್‌ 5 ರಿಂದ ವಿಧಾನ ಮಂಡಲ ಅಧಿವೇಶನದಲ್ಲಿ ಸಂವಿಧಾನದ ಕಲಂ 183ರ ಅಡಿ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ನೀಡಬೇಕು ಎಂದು  ಮುಖ್ಯ ಸಚೇತಕ ಐವನ್‌ ಡಿಸೋಜಾ ನೇತೃತ್ವದ ಕಾಂಗ್ರೆಸ್‌ ಸದಸ್ಯರು ಮಂಗಳವಾರವಿಧಾನಪರಿಷತ್‌ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ನೋಟಿಸ್‌ ನೀಡಿದ್ದಾರೆ.
75 ಮಂದಿಯಿರುವ ಪರಿಷತ್ ನಲ್ಲಿ ಕಾಂಗ್ರೆಸ್ 35 ಸದಸ್ಯರನ್ನು ಹೊಂದಿದ್ದು, ಶಂಕರಮೂರ್ತಿ ಅವರನ್ನು ತೆರವುಗೊಳಿಸಲು 13 ಮಂದಿ ಜೆಡಿಎಸ್ ಸದಸ್ಯರ ಬೆಂಬಲ ಕೋರಲಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರ ಜೊತೆ ಮಾತುಕತೆ ನಡೆಸಿದ್ದಾರೆ.
ಸದ್ಯ ಎರಡು ಸಚಿವ ಸ್ಥಾನಗಳು ತೆರವಾಗಿದ್ದು, ಜಿ ಪರಮೇಶ್ವರ್ ಗೃಹ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದರೇ ಮೂರು ಸಚಿವ ಸ್ಥಾನಗಳನ್ನು ತುಂಬಲು ಸಚಿವ ಸಂಪುಟ ವಿಸ್ತರಣೆ ನಡೆಸಲಾಗುವುದು
ಕೆಪಿಸಿಸಿ ಅಧ್ಯಕ್ಷ ಹುದ್ದೆಯಿಂದ ವಂಚಿತಗೊಂಡು ಅಸಮಾಧಾನಗೊಂಡಿರುವ ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರನ್ನು 2018ರ ವಿಧಾನಸಭೆ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. 
SCROLL FOR NEXT