ಬೆಂಗಳೂರು: ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಗುರಿಯಾಗಿಟ್ಟುಕೊಂಡು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಷಯವನ್ನು ವಿವಾದ ಮಾಡುವ ಮೂಲಕ ಅವರ ಹತಾಶೆಯ ಮನೋವೃತ್ತಿಯನ್ನು ತೋರಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ನವ ಕರ್ನಾಟಕದ ನಿರ್ಮಾಣಕ್ಕೆ ಕಾರಣಕರ್ತರಾದ 26 ನಾಯಕರ ಜಯಂತಿಯನ್ನು ನಾವು ಆಚರಿಸುತ್ತೇವೆ. ಆದರೆ ಹತಾಶೆಯಿಂದ ಅಮಿತ್ ಶಾ ಅವರು ಈ ವಿಚಾರದಲ್ಲಿ ಕೋಮುವಾದಿಯ ಮನೋಭಾವ ತೋರಿಸುತ್ತಿದ್ದಾರೆ. ಅದಕ್ಕೆ ಟಿಪ್ಪು ಜಯಂತಿ ವಿಚಾರವನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಅವರು, ಚುನಾವಣೆ ಹತ್ತಿರ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಅಮಿತ್ ಶಾರಂತಹ ಪ್ರವಾಸಿಗರು ಇಲ್ಲಿಗೆ ಬಂದು ತಮ್ಮ ಅಜ್ಞಾನವನ್ನು ಎತ್ತಿ ತೋರಿಸುತ್ತಾರೆ. ಕರ್ನಾಟಕ ರಾಜ್ಯೋತ್ಸವವನ್ನು ಕರ್ನಾಟಕ ಮಹೋತ್ಸವ ಎಂಬುದಾಗಿ ಹೇಳಿದ್ದಾರೆ ಎಂದು ಟೀಕಿಸಿದರು.
ನಿನ್ನೆ ಬೆಂಗಳೂರಿನಲ್ಲಿ ಬಿಜೆಪಿ ವತಿಯಿಂದ ಉದ್ಘಾಟನೆಗೊಂಡ ಪರಿವರ್ತನಾ ರ್ಯಾಲಿಯಲ್ಲಿ ಅಮಿತ್ ಶಾ ಅವರು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ 'ಮೈಸೂರು ಹುಲಿ' ಟಿಪ್ಪು ಜಯಂತಿಯನ್ನು ಆಚರಿಸುವ ಮೂಲಕ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡಲು ಹೊರಟಿದೆ ಎಂದು ಆಪಾದಿಸಿದ್ದರು.
ಅಮಿತ್ ಶಾ ಭಾಷಣದ ವೇಳೆ, ಕರ್ನಾಟಕ ಮಹೋತ್ಸವವನ್ನು ರಾಜ್ಯ ಸರ್ಕಾರ ಅದ್ದೂರಿಯಾಗಿ ಆಚರಿಸಬೇಕಾಗಿತ್ತು. ಆದರೆ ಸರ್ಕಾರ ಆ ಉತ್ಸಾಹದಲ್ಲಿ ಇಲ್ಲ. ಅದರ ಬದಲು ಟಿಪ್ಪು ಜಯಂತಿ ಆಚರಣೆಗೆ ಹೆಚ್ಚಿನ ಒಲವು ತೋರಿಸುತ್ತಿದೆ. ಇದು ವೋಟು ಬ್ಯಾಂಕ್ ರಾಜಕಾರಣವನ್ನು ತೋರಿಸುತ್ತಿದ್ದು ಅದರಿಂದ ಕರ್ನಾಟಕದ ಜನತೆಗೆ ಉಪಯೋಗವಾಗುವುದಿಲ್ಲ ಎಂದು ಟೀಕಿಸಿದ್ದರು.
ಈ ಬಗ್ಗೆ ಇಂದು ಸರಣಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ, ರಾಜ್ಯದ ಬಿಜೆಪಿ ಮುಖಂಡರನ್ನು ಕೂಡ ಟೀಕಿಸಿದ್ದಾರೆ. ಟಿಪ್ಪುವೇಷ ಹಾಕಿ ಖಡ್ಗಹಿಡಿದು ಕುಣಿದಿದ್ದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್,ಅಶೋಕ್ ಅವರು ಈಗ ಟಿಪ್ಪು ಜಯಂತಿ ವಿರೋಧಿಸುತ್ತಿರುವುದು ಆತ್ಮವಂಚನೆ ಮಾಡಿದಂತೆ. ರಾಜ್ಯದ ಜನತೆ ಟಿಪ್ಪು ಜಯಂತಿಯನ್ನು ಒಪ್ಪಿದ್ದಾರೆ. ಟಿಪ್ಪು ಒಬ್ಬ ದೇಶಪ್ರೇಮಿ. ಆತ ಹಿಂದೂ ಅಥವಾ ಯಾವುದೇ ಜನಾಂಗದ ವಿರೋಧಿ ಆಗಿರಲಿಲ್ಲ.ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಎಂದು ಬಣ್ಣಿಸಿದ ಬಳಿಕ ರಾಜ್ಯ ಬಿಜೆಪಿ ನಾಯಕರಿಗೆ ಜ್ಞಾನೋದಯವಾಗಿದೆ. ಅಮಿತ್ ಶಹಾ ಅವರಿಂದ ಪಾಠ ಹೇಳಿಸಿಕೊಳ್ಳಲಿ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics