ಬೆಂಗಳೂರು: ರಾಜ್ಯದ ಆಡಳಿತಾರೂಢ ಸಿದ್ಧರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ಲೋಕಾಯುಕ್ತವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ತನ್ನ ಕೈಗೊಂಬೆ ಮಾಡಿಕೊಂಡಿದೆ ಎಂದು ಗುರುವಾರ ಹೇಳಿದ್ದಾರೆ.
ಪಕ್ಷದ ಪರಿವರ್ತನಾ ಯಾತ್ರೆಗೆ ಚಾಲನೆ ನೀಡಿದ ಬಳಿಕ ಮಾತನಾಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಲೋಕಾಯುಕ್ತವನ್ನು ಕೈಗೊಂಬೆ ಮಾಡಿಕೊಂಡಿರುವ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಭ್ರಷ್ಟರಿಗೆ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ರಾಜ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಅನುದಾನ ಕುರಿತಂತೆ ಮಾಹಿತಿ ನೀಡಿರುವ ಅವರು ನಮ್ಮ ಮೆಟ್ರೋಗೆ ಕೇಂದ್ರ ಸರ್ಕಾರ ರೂ.2,617, ಅಮೃತ ಯೋಜನೆಗೆ ರೂ.4,900 ಕೋಟಿ, ಸ್ಮಾರ್ಟ್ ಸಿಟಿ ರೂ.960 ಕೋಟಿ ಹಾಗೂ ರೈಲ್ವೇ ಯೋಜನೆಗಳಿಗೆ ರೂ.2,917 ಕೋಟಿಯನ್ನು ನೀಡಿದೆ. ಆದರೆ, ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳ ಅಡಿಯಲ್ಲಿ ಈ ಹಣ ಜನರಿಗೆ ತಲುಪುತ್ತಿಲ್ಲ. ಕೇಂದ್ರ ನೀಡುತ್ತಿರುವ ಹಣವನ್ನು ಕಾಂಗ್ರೆಸ್ ನಾಯಕರು ಹಾಗೂ ಭ್ರಷ್ಟ ಅಧಿಕಾರಿಗಳು ತಮ್ಮ ಜೇಬಿಗೆ ಹಾಕಿಕೊಳ್ಳುತ್ತಿದ್ದಾರೆ. ಪ್ರತಿಯೊಂದಲ್ಲೂ ರಾಜಕೀಯ ಮಾಡುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಕೇಂದ್ರ ಯೋಜನೆಗಳನ್ನು ಜಾರಿಗೆ ತರಲು ಅಸಹಕಾರ ತೋರಿಸುತ್ತಿದೆ.
ಕೇಂದ್ರ ಸರ್ಕಾರ ದಲಿತರು, ಆದಿವಾಸಿಗಳು, ಹಿಂದುಳಿದವರು, ಯುವ ಜನಾಂಗದ ಕಲ್ಯಾಣಕ್ಕಾಗಿ 130 ಯೋಜನೆಗಳನ್ನು ಜಾರಿಗೊಳಿಸಿದೆಯಾದರೂ ರಾಜ್ಯದ ಅಸಹಕಾರದಿಂದ ಆ ಯೋಜನೆಗಳು ಕರ್ನಾಟಕದಲ್ಲಿ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಲು ವಿಧೇಕ ಜಾರಿಗೊಳಿಸುತ್ತಿದ್ದು, ಇದಕ್ಕೆ ಕಾಂಗ್ರೆಸ್ ಸರ್ಕಾರ ರಾಜ್ಯಸಭೆಯಲ್ಲಿ ಅಡ್ಡಿಪಡಿಸುತ್ತಿದೆ. ತಾವು ಹಿಂದುಳಿದ ವರ್ಗಗಳ ಹಿತೈಷಿ ಎಂದು ಹೇಳಿಕೊಳ್ಳುತ್ತಿರುವ ಸಿದ್ದರಾಮಯ್ಯ ಅವರು ಈ ವಿಚಾರದಲ್ಲಿ ಮೌನ ಮುರಿಯಬೇಕಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, 10ಕ್ಕೂ ಹೆಚ್ಚು ಬಿಜೆಪಿ ಹಾಗೂ ಆರ್'ಎಸ್ಎಸ್ ಕಾರ್ಯಕರ್ತರನ್ನು ಹತ್ಯೆ ಮಾಡಿಲದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೇಶದ ರಕ್ಷಣೆ ಹಾಗೂ ಸುರಕ್ಷತೆ ಬೇಕಾಗಿಲ್ಲ. ಕ್ರಿಮಿನಲ್ ಮೊಕದ್ದಮೆ ಇರುವ ಪಿಎಫ್ಐ, ಎಸ್'ಡಿಪಿಐ, ಕೆಎಫ್'ಡಿ ಮೊದಲಾದ ಸಂಘಟನೆಗಳ ಕಾರ್ಯಕರ್ತರನ್ನು ಆರೋಪ ಮುಕ್ತ ಮಾಡುತ್ತಿದ್ದಾರೆದಿದ್ದಾರೆ.