ಕಲಬುರಗಿ: ಕಾಂಗ್ರೆಸ್ ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಅವರು ತಮ್ಮ ಸ್ವಕ್ಷೇತ್ರ ಅಫ್ಜಲಪುರದಲ್ಲಿ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಡಿದ ಭಾಷಣದ ಬಗ್ಗೆ ಸೋಮವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗುತ್ತೇದಾರ್ ಅವರು, ನನ್ನ ಕ್ಷೇತ್ರದಲ್ಲಿ ಸಚಿವರ ಕಾರ್ಯಕ್ರಮ ನಡೆದರೂ ನನಗೆ ಆಹ್ವಾನ ನೀಡಿರಲಿಲ್ಲ. ನಾನು ಒಬ್ಬ ಕಾಂಗ್ರೆಸ್ ಪಕ್ಷದ ಶಾಸಕ. ಅಫ್ಜಲಪುರವನ್ನು ಪ್ರತಿನಿಧಿಸುತ್ತಿದ್ದೇನೆ. ಆದರೆ ಕಾರ್ಯಕ್ರಮದ ಆಯೋಜಕರು ನನ್ನನ್ನು ಕಾರ್ಯಕ್ರಮದಿಂದ ಹೊರಗಿಟ್ಟಿದ್ದರು ಮತ್ತು ನನ್ನ ಕ್ಷೇತ್ರಕ್ಕೆ ಬಂದು ಸಚಿವರು ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಎಂದು ಭಾಷಣ ಮಾಡಿದರೆ ಜನತೆಗೆ ಏನು ಸಂದೇಶ ಹೋಗುತ್ತೇ? ಎಂದು ಪ್ರಶ್ನಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರು ಒಬ್ಬ ಶಾಸಕರಾಗಿ ಈ ರೀತಿ ಮಾತನಾಡಿದ್ದರೆ ನಾನು ಅದನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಆದರೆ ಅವರು ಒಬ್ಬ ಸಚಿವರಾಗಿ ಮಾತನಾಡಿದ್ದಾರೆ. ಸಚಿವರಾಗಿ ಈ ರೀತಿ ಮಾತನಾಡುವುದರಿಂದ ಸಾರ್ವಜನಿಕರ ಮೇಲೆ ಗಂಭೀರ ಪರಿಣಾಮ ಬೀರುತ್ತೆ ಎಂಬ ಅರಿವು ಅವರಿಗೆ ಇರಬೇಕಿತ್ತು ಎಂದು ಗುತ್ತೇದಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ತಾವು ಕಾಂಗ್ರೆಸ್ ತೊರೆದು ಶೀಘ್ರದಲ್ಲೇ ಬಿಜೆಪಿ ಸೇರುತ್ತಾರೆ ಎಂಬುದನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಗುತ್ತೇದಾರ್, ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ತೊರೆಯುವುದಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದಲೇ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ.