ರಾಜಕೀಯ

ವಿಧಾನಸಭೆ ಚುನಾವಣೆ: ಯೋಗೇಶ್ವರ್ ವಿರುದ್ಧ ಸ್ಪರ್ಧಿಸಲು ಸಂಸದ ಡಿಕೆ ಸುರೇಶ್ ರೆಡಿ

Sumana Upadhyaya
ಬೆಂಗಳೂರು: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಚೆನ್ನಪಟ್ಟಣ ಕ್ಷೇತ್ರದ ಶಾಸಕ ಸಿ.ಪಿ.ಯೋಗೇಶ್ವರ್ ಗೆ ಇದು ಕಷ್ಟದ ಸಮಯ ಎಂದೇ ಹೇಳಬಹುದು. ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸೋದರ ಹಾಗೂ ಸಂಸದ ಡಿ.ಕೆ.ಸುರೇಶ್ ಅವರು ಯೋಗೇಶ್ವರ್ ವಿರುದ್ಧ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ನಡೆಸುವ ಇಂಗಿತದಲ್ಲಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ತಮ್ಮ ವಿರುದ್ಧ ಯಾವುದೇ ರಾಜಕೀಯ ಪ್ರತಿಸ್ಫರ್ಧಿಗಳು ಮೇಲುಗೈ ಸಾಧಿಸದಂತೆ ನೋಡಿಕೊಳ್ಳುವ ಉಪಾಯದಲ್ಲಿದ್ದಾರೆ ಡಿಕೆ ಸಹೋದರರು.
ಯೋಗೇಶ್ವರ್ ಇತ್ತೀಚೆಗಷ್ಟೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಪ್ರಬಲ ಒಕ್ಕಲಿಗ ಸಮುದಾಯದಲ್ಲಿ ತಮ್ಮನ್ನು ರಾಜಕೀಯವಾಗಿ ಮುಗಿಸಲು ಡಿಕೆ ಸೋದರರು ಪ್ರಯತ್ನಿಸುತ್ತಿದ್ದಾರೆ ಎಂದು ಯೋಗೇಶ್ವರ್ ಇತ್ತೀಚೆಗೆ ಆರೋಪಿಸಿದ್ದರು.
ಪಕ್ಷದ ಹೈಕಮಾಂಡ್ ಬಯಸಿದರೆ ಚೆನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾನು ಸಿದ್ದ. ಕ್ಷೇತ್ರದ ರಾಜಕೀಯ ಚಿತ್ರಣ ಇತ್ತೀಚೆಗೆ ಬದಲಾಗಿದೆ. ನನ್ನ ಪ್ರತಿಸ್ಪರ್ಧಿಗಳ ವಿರುದ್ಧ ನೇರ ಹಣಾಹಣಿಗೆ ನಾನು ಸಿದ್ಧನಿದ್ದೇನೆ ಎಂದು ಸುರೇಶ್ ನಿನ್ನೆ ಚೆನ್ನಪಟ್ಟಣದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಹೇಳಿದ್ದರು.
ಇದೇ ಸಂದರ್ಭದಲ್ಲಿ ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ ಸುರೇಶ್, ಕಳೆದ ನಾಲ್ಕು ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಹಣ ಪಡೆದುಕೊಂಡು ನಂತರ ಕಾಂಗ್ರೆಸ್ ನ ಸಹ ಸದಸ್ಯತ್ವಕ್ಕೆ ರಾಜಿನಾಮೆ ನೀಡಿ ಪಕ್ಷಕ್ಕೆ ಯೋಗೇಶ್ವರ್ ದ್ರೋಹ ಬಗೆದಿದ್ದಾರೆ. ವಿಧಾನಸಭೆ ಚುನಾವಣೆಗೆ ಮುನ್ನ ಕೋಮುವಾದಿ ಪಕ್ಷವನ್ನು ಸೇರಿದ್ದಾರೆ. ಯಾವುದೇ ಸಮಯದಲ್ಲಿ ತಮ್ಮ ಬಣ್ಣ ಬದಲಾಯಿಸುವ ಇಂತವರನ್ನು ಜನರು ಬೆಂಬಲಿಸಬಾರದು ಎಂದು ಅವರು ಹೇಳಿದರು.
ಚೆನ್ನಪಟ್ಟಣ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಮತ್ತು ಜನರ ದೂರು ದುಮ್ಮಾನಗಳನ್ನು ಬಗೆಹರಿಸಲು ಪ್ರತಿ ವಾರ ಭೇಟಿ ಕೊಟ್ಟು ಪರಾಮರ್ಶೆ ನಡೆಸುವುದಾಗಿ ಇದೇ ಸಂದರ್ಭದಲ್ಲಿ ಡಿ.ಕೆ.ಸುರೇಶ್ ಜನತೆಗೆ ಭರವಸೆ ನೀಡಿದರು.
SCROLL FOR NEXT